ನ್ಯೂಸ್

ಕರ್ನಾಟಕದಲ್ಲಿ ಟೆಸ್ಲಾ ತಯಾರಿಕಾ ಘಟಕ ಸ್ಥಾಪಿಸಲು ಎಲಾನ್ ಮಸ್ಕ್​ಗೆ ಸಚಿವ ಎಂ.ಬಿ.ಪಾಟೀಲ್ ಆಹ್ವಾನ

ಬೆಂಗಳೂರು: ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಕಂಪನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬಗ್ಗೆ ಪರಿಗಣಿಸಬೇಕು. ಕಂಪನಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೋರಿದ್ದಾರೆ.

ಟೆಸ್ಲಾ ಕಂಪನಿ ತನ್ನ ಉದ್ಯಮವನ್ನು ಭಾರತದಲ್ಲಿ ವಿಸ್ತರಿಸಲು ಇಷ್ಟ ಪಡುವುದಾದರೆ ಕರ್ನಾಟಕ ಅದಕ್ಕೆ ಪ್ರಶಸ್ತ ತಾಣವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸೌರಫಲಕಗಳು ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಅಲ್ಲದೆ, ಸ್ಪೇಸ್-ಎಕ್ಸ್ ಕಂಪನಿ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ. ಈ ಕಂಪನಿಗಳನ್ನು ಮುನ್ನಡೆಸುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸುವುದಾದರೆ ಸಹಕಾರ ಕೊಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಪಾಟೀಲ್​ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಹೀಗಾಗಿ, ಟೆಸ್ಲಾ ಘಟಕ ತೆರೆಯಲು ಇದು ಸೂಕ್ತ ನೆಲೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್‌ ಮಸ್ಕ್ ಅವರನ್ನು ಭೇಟಿ‌ ಮಾಡಿ ದೇಶದಲ್ಲಿ ಬಂಡವಾಳ ಹೂಡುವಂತೆ ಕೋರಿದ್ದರು. ಆ ಹಿನ್ನೆಲೆಯಲ್ಲಿ ಪಾಟೀಲ್ ಟ್ವೀಟ್ ಮಾಡಿ ಕರ್ನಾಟಕಕ್ಕೇ ಬನ್ನಿ ಎನ್ನುವ ಮನವಿ‌ ಮಾಡಿದ್ದಾರೆ.