ಬೆಂಗಳೂರು: ಗಡಿಭಾಗದಲ್ಲಿರುವ ಕಾರದಗಾದ ಕನ್ನಡ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಡಿದರು ಎನ್ನಲಾದ ಮಾತು ರಾಜಕೀಯ ಕಿಡಿ ಹೊತ್ತಿಸಿ, ಬಿಜೆಪಿ ನಾಯಕರು ಸಿಡಿಮಿಡಿಗೊಳ್ಳುವಂತೆ ಮಾಡಿದೆ.
ನಾಡಿನ ಸಮಗ್ರತೆ, ಸಾಮರಸ್ಯಕ್ಕೆ ಚ್ಯುತಿ ಹೇಳಿಕೆ, ವೋಟ್ ಬ್ಯಾಂಕ್ ರಾಜಕಾರಣವೆಂದು ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಅಲ್ಲದೆ, ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.
ಬೆಳಗಾವಿ ಮುಂಚೆ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಹೆಬ್ಬಾಳ್ಕರ್ ಹೇಳಿರಲಾರರು ಎಂದು ಹಿರಿಯ ಸಚಿವ ಎಚ್.ಕೆ.ಪಾಟೀಲ ಸಮಜಾಯಿಷಿ ನೀಡಿದರೆ, ಐತಿಹಾಸಿಕ ಸತ್ಯವೆಂದು ಮತ್ತೊಬ್ಬ ಸಚಿವ ಎಂ.ಬಿ.ಪಾಟೀಲ ಸಮರ್ಥಿಸಿಕೊಂಡಿದ್ದಾರೆ.
ನಾನು ಹೆಮ್ಮೆಯ ಕನ್ನಡತಿ, ಕನ್ನಡಿಗರಿಗೆ ಹುರುಪು ತುಂಬಲು ಸಮಾವೇಶದಲ್ಲಿ ಆಡಿದ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸುವುದು ಬೇಡವೆಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿ, ಪರ-ವಿರೋಧದ ರಾಜಕೀಯ ಕಿಚ್ಚು ಶಮನಗೊಳಿಸಲು ಪ್ರಯತ್ನಿಸಿದ್ದಾರೆ.
ಕನ್ನಡತಿ ಎಂದು ಹೇಳಿಕೊಳ್ಳುವ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚುನಾವಣಾ ಕಾಲದಲ್ಲಿ ಸಾಮರಸ್ಯದ ಸಮಾಜಕ್ಕೆ ಬೆಂಕಿ ಹಚ್ಚುವ ಸಾಹಸಕ್ಕೆ ಕೈ ಹಾಕಿರುವುದು ರಾಜಕೀಯ ಹುನ್ನಾರವಲ್ಲದೇ ಬೇರೇನೂ ಅಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಕರ್ನಾಟಕದ ಪರ, ನಿಷ್ಠೆ ತೋರದ ಹೆಬ್ಬಾಳ್ಕರ್ ಅವರನ್ನು, ಕನ್ನಡದ ಬದ್ಧತೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯನವರು ಈ ಕೂಡಲೇ ಸಂಪುಟದಿಂದ ವಜಾಗೊಳಿಸಲಿ. ಆ ಮೂಲಕ ಕರ್ನಾಟಕದ ಸಾರ್ವಭೌಮತ್ವ ಹಾಗೂ ಭಾಷಾ ಸಾಮರಸ್ಯದ ತಮ್ಮ ನೈಜ ಕಾಳಜಿ ತೋರಿಸಲಿ ಎಂದು ಆಗ್ರಹಿಸಿದ್ದಾರೆ.
ವಿಶಾಲ ಕರ್ನಾಟಕಕ್ಕೆ ಬೆಳಗಾವಿ ಸೇರಿ ಅನೇಕ ವರ್ಷಗಳಾಗಿವೆ. ವೋಟಿನ ರಾಜಕಾರಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಹೇಳಿಕೆ ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಕರ್ನಾಟಕ ಹಂಚಿಹೋಗಿತ್ತು. ಅದಕ್ಕಾಗಿಯೇ ಕರ್ನಾಟಕ ಏಕೀಕರಣವಾಗಿದ್ದು, ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆಗಬೇಕೆ ಹೊರತು ರಾಜಕೀಯ ಪ್ರೇರಿತ ಹುನ್ನಾರವಾಗಬಾರದು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿವಿದಿದ್ದಾರೆ.
ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡು ಗಡಿಭಾಗದಲ್ಲಿ ಕನ್ನಡಿಗರು, ಮರಾಠಿ ಭಾಷಿಕರೆಲ್ಲ ಸೇರಿ ಕಾರದಗಾದದಲ್ಲಿ ಕನ್ನಡ ಸಮಾವೇಶ ಆಯೋಜಿಸಿದ್ದರು. ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು. ಹಿಂದಿನಿಂದಲೂ ಕನ್ನಡಿಗರು, ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದೇನೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ತಿತ್ವದಲ್ಲೇ ಇಲ್ಲದ್ದರಿಂದ ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ. ಕಾರದಗಾ ಕನ್ನಡ ಸಮಾವೇಶಕ್ಕೆ ಮುಂದಿನ ವರ್ಷದಿಂದ ರಾಜ್ಯ ಸರ್ಕಾರದ ಆರ್ಥಿಕ ಸಹಾಯ, ಅಲ್ಲಿನ ಸಂಘಟನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುವ ಭರವಸೆ ನೀಡಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಣೆ ನೀಡಿದ್ದಾರೆ.