ನ್ಯೂಸ್

ಕೆಐಒಸಿಎಲ್‌ಗೆ ಅರಣ್ಯ ಜಮೀನು ಹಸ್ತಾಂತರಕ್ಕೆ ಸಚಿವ ಖಂಡ್ರೆ ನಿರ್ಬಂಧ

ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್)ಯ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡವೆಂದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ರಾಜ್ಯದ ಅರಣ್ಯ ಸಚಿವ ಈಶ್ವರಖಂಡ್ರೆ ಚೆಕ್ ಮೇಟ್ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದೇವದಾರಿ ಅರಣ್ಯ ಪ್ರದೇಶ ರಕ್ಷಣೆ ಜತೆಗೆ ಜೀವರಾಶಿಗೆ ತೊಂದರೆಯಾಗದಂತೆ ಕಂಪನಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ಅರಣ್ಯ ನಾಶದ ಬಗ್ಗೆ ಆತಂಕ ಬೇಡವೆಂದು ಎಚ್‌ಡಿಕೆ ಹೇಳಿದ್ದರು.

ಬೆಂಗಳೂರಿನಲ್ಲಿಯೇ ಕೆಐಒಸಿಎಲ್ ಉನ್ನತಾಧಿಕಾರಿಗಳ ಸಭೆ ಕೆಲಗಳ ಹಿಂದೆ ನಡೆಸಿ ಎಚ್‌ಡಿಕೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ಕೆಐಒಸಿಎಲ್‌ಗೆ ಜಮೀನು ಹಸ್ತಾಂತರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಬಂಧ ವಿಧಿಸಿದ್ದಾರೆ.

ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸಚಿವ ಖಂಡ್ರೆ ಟಿಪ್ಪಣಿಯೊಂದನ್ನು ರವಾನಿಸಿ, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ನಿರ್ದೇಶನಗಳನ್ನು ಕೆಐಒಸಿಎಲ್ ಅನುಷ್ಠಾನ ಮಾಡುವವರೆಗೆ ದೇವದಾರಿ ಅರಣ್ಯ ಜಮೀನು ಹಸ್ತಾಂತರಿಸಕೂಡದು ಎಂದು ಸೂಚಿಸಿದ್ದಾರೆ.

ಕೆಐಒಸಿಎಲ್ ವಿರುದ್ಧ ದೂರು

ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಘಟ್ಟ ಪ್ರದೇಶದಲ್ಲಿ 401.57 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಈ ಸಂಸ್ಥೆ ತಿರುವಳಿ ಪಡೆದಿದ್ದು, ಅರಣ್ಯ ಇಲಾಖೆಯಿಂದ ಅರಣ್ಯ ತಿರುವಳಿ ಗುತ್ತಿಗೆ ಪತ್ರ ಸಹಿಯೂ ಸೇರಿ ಜಮೀನು ಹಸ್ತಾಂತರ ಬಾಕಿ ಇರುವುದನ್ನು ಗಮನಿಸಲಾಗಿದೆ.

ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಿಂದೆ ನಡೆದ ಗಣಿಗಾರಿಕೆ ಲೋಪದೋಷ, ಅರಣ್ಯ ಕಾಯ್ದೆ ಉಲ್ಲಂಘನೆಗಾಗಿ ಈ ಸಂಸ್ಥೆಗೆ ಸಿಇಸಿ ಅನೇಕ ನಿರ್ದೇಶನಗಳನ್ನು ನೀಡಿದೆ. ಆದರೆ ಸಿಇಸಿ ನೀಡಿದ ನಿರ್ದೇಶನಗಳನ್ನು ನಿಗದಿತ ಕಾಲಮಿತಿಯೊಳಗೆ ಜಾರಿ ಮಾಡಲು ಸಂಸ್ಥೆ ವಿಲವಾಗಿದೆ ಎಂಬ ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಉದ್ದೇಶಿತ ಜಮೀನನ್ನು ಗಣಿಗಾರಿಕೆ ನೀಡಕೂಡದು. ಗಣಿಗಾರಿಕೆಗೆ ನೀಡಿರುವ ಅರಣ್ಯ ತಿರುವಳಿಪತ್ರ ಅನುಷ್ಠಾನ ಮಾಡಬಾರದು. ಅರಣ್ಯತಿರುವಳಿ ಗುತ್ತಿಗೆ ಒಪ್ಪಂದ, ಅರಣ್ಯ ಜಮೀನು ಕಂಪನಿಗೆ ಹಸ್ತಾಂತರ ಮಾಡದಂತೆ ಸಂಬಂಧಿಸಿದವರಿಗೆ ಕೂಡಲೇ ಸೂಚನೆ ನೀಡಬೇಕು ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಈಶ್ವರಖಂಡ್ರೆ ನಿರ್ದೇಶಿಸಿದ್ದಾರೆ.

ಕಳ್ಳಬೇಟೆ ನಿಯಂತ್ರಣಕ್ಕೆ ತಾಕೀತು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗ್ರಾಮದ ಬಳಿಯ ಅರಣ್ಯದೊಳಗೆ ನಾಲ್ಕೈದು ಕಾಡುಕೋಣಗಳ ಕಳೆಬರ ಪತ್ತೆ, ಮೈಸೂರು ಜಿಲ್ಲೆ ನಾಗರಹೊಳೆ ಅರಣ್ಯದ ಕುಶಾಲನಗರ ವ್ಯಾಪ್ತಿ ಆನೆಚೌಕೂರು ಮೊದಲಾದ ಕಡೆ ಕೆಲವು ತಿಂಗಳಲ್ಲಿ ಕಾಡುಕೋಣೆಗಳ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ನಾಡಬೇಟೆ ಬಂದೂಕು ಬಳಸಿ ಕಳ್ಳಬೇಟೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎಲ್ಲ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಸಂರಕ್ಷಣೆ, ಕಳ್ಳಬೇಟೆ ನಿಯಂತ್ರಣ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕಾಡುಕೋಣಗಳ ಕಳೆಬರ ಪತ್ತೆ, ಹತ್ಯೆ ಪ್ರಕರಣದ ವರದಿಗಳ ಬಗ್ಗೆ ವಸ್ತುಸ್ಥಿತಿ ಪರಾಮರ್ಶಿಸಿ ಜೂ.25ರೊಳಗೆ ವರದಿ ಸಲ್ಲಿಸಬೇಕು ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಖಂಡ್ರೆ ಸೂಚಿಸಿದ್ದಾರೆ.