ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನ ಡ್ರಾಮಾ ನಡೆಯೋಲ್ಲ. ಇಂತಹ ನಾಟಕ ನೋಡಿಯೇ ಜನ ಬೇಸತ್ತು ಕಳೆದ ಚುನಾವಣೆಯಲ್ಲಿ ಸೋಲಿಸಿದರು. ಸ್ವತಃ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ಸೋತರು. ಲೋಕಸಭೆ ಹಾಗೂ ಉಪ ಚುನಾವಣೆಗಳಲ್ಲಿ ನೆಲಕಚ್ಚಿತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಂದರೇನೆ ಚುನಾವಣೆಯಲ್ಲಿ ಗೆಲ್ಲುವ ಪಕ್ಷವಾಗಿದೆ. ರಾಜ್ಯದ ಜನತೆ ಆ ಮಟ್ಟಿಗೆ ವಿಶ್ವಾಸವಿರಿಸಿದ್ದಾರೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಮಾಡಿದೆ. ಮುಂದೆಯೂ ಒಳ್ಳೆಯ ಕೆಲಸಗಳನ್ನು ಮಾಡಲಿದೆ ಎಂದರು.
ಸವಾಲು
ಅಕ್ರಮ, ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಲಿ. 10% ಕಮಿಷನ್ ಕೊಟ್ಟರೇನೆ ಟೆಂಡರ್ ಫೈನಲ್ ಆಗುತ್ತದೆ ಹೇಳಿದ ಸಚಿವರು ಯಾರೆಂದು ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಬಹಿರಂಗಪಡಿಸಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಟ್ವೀಟ್ ನಲ್ಲೇ ವಿರೋಧ ಪಕ್ಷವಿದು. ಪ್ರತಿದಿನವೂ ಟ್ವೀಟ್ ಮೂಲಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೆ ಕೊಡುತ್ತಾರೆ. ಅವರಲ್ಲೇ ಹೊಂದಾಣಿಕೆಯಿಲ್ಲ, ಗುಂಪುಗಾರಿಕೆಯಿಂದಾಗಿ ರಚನಾತ್ಮಕ ಪ್ರತಿಪಕ್ಷದ ಹೊಣೆಗಾರಿಕೆ ನಿಭಾಯಿಸಲಾಗದೆ ಮುಗ್ಗರಿಸಿದೆ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.
18ಕ್ಕೆ ಸಭೆ
ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಗೆ ಸಂಬಂಧಿಸಿದಂತೆ 18ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಮಠಾಧೀಶರು, 198 ಹಿಂದುಳಿದ ಜಾತಿಗಳ ಪ್ರಮುಖರ ಸಭೆ ಸೇರಿ ಮುಂದಿನ ನಡೆ ತೀರ್ಮಾನಿಸಲಾಗುವುದು. ಭಾನುವಾರ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಪಿ.ಆರ್.ರಮೇಶ್, ಕೆ.ಪಿ.ನಂಜುಂಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು, ಪ್ರೊ.ಬಿ.ಕೆ.ರವಿ, ಪ್ರೊ.ನರಸಿಂಹಯ್ಯ, ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಇನ್ನಿತರರು ಇದ್ದರು.