ನ್ಯೂಸ್

ಒಡಿಶಾ ಕಾರ್ಮಿಕನಿಗೆ ಚಿಕಿತ್ಸೆ ನೀಡಿದ ಸಚಿವ ಡಾ.ಸುಧಾಕರ್

ಬೆಂಗಳೂರು: ಊರಿಗೆ ಹಿಂದಿರುಗಲು ಬೆಂಗಳೂರಿನ ಅರಮನೆ ಮೈದಾನಕ್ಕೆ ಶನಿವಾರ ಬಂದಿದ್ದ ಒಡಿಶಾ ಮೂಲದ ಕಾರ್ಮಿಕ ಅರ್ಷದ್​ ಎಂಬಾತ ಹಠಾತ್ತನೆ ಕುಸಿದು ಬಿದ್ದಿದ್ದನ್ನು ಕಂಡು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು. ಹಠಾತ್ತನೆ ಕುಸಿದು ಬಿದ್ದ ಅರ್ಷದ್​ ಮೂರ್ಛೆರೋಗದಿಂದ ಬಳಲುತ್ತಿದ್ದ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ. ಸುಧಾಕರ್​ ಅಲ್ಲಿ ಆಯೋಜನೆಗೊಂಡಿದ್ದ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶನಿವಾರ ತೆರಳುತ್ತಿದ್ದರು. ಇವರ ವಾಹನ ಅರಮನೆ ಮೈದಾನದ ಬಳಿ ಸಾಗುತ್ತಿದ್ದಾಗ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದನ್ನು ಗಮನಿಸಿದರು. ತಮ್ಮ ವಾಹನ ನಿಲ್ಲಿಸಿ ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾಗ ಕಾರ್ಮಿಕನೊಬ್ಬ ಹಠಾತ್ತನೆ ಕುಸಿದು ಬಿದ್ದಿದ್ದು ಇವರ ಕಣ್ಣಿಗೆ ಬಿತ್ತು.

ಅರ್ಷದ್​ ಬಿದ್ದಿದ್ದನ್ನು ಕಂಡರೂ, ಆತನ ಜತೆಗಿದ್ದವರಾಗಲಿ ಅಥವಾ ಸುತ್ತಮುತ್ತಲಿದ್ದ ಜನರಾಗಲಿ ಆತನ ನೆರವಿಗೆ ಧಾವಿಸಲಿಲ್ಲ. ಆದರೆ ಸಚಿವ ಡಾ. ಸುಧಾಕರ್​ ತಕ್ಷಣವೇ ಆತನ ಬಳಿ ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಆಂಬುಲೆನ್ಸ್​ ಕರೆಯಿಸಿಕೊಂಡು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲು ನೆರವಾದರು.