ನ್ಯೂಸ್

ಸರ್ಕಾರ, ಸಿಎಂ ಕೈವಾಡವಿದೆ ಅಂತ… ಕೇಂದ್ರದ ತಾಳಕ್ಕೆ ತನಿಖಾ ಸಂಸ್ಥೆಗಳು ಕುಣಿಯುತ್ತಿವೆ ಅನ್ನೋದಕ್ಕೆ ಇದೇ ಸಾಕ್ಷಿ

ಬೆಂಗಳೂರು: ‘ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಕೈವಾಡ ಇದೆ ಎಂದು ಹೇಳಿ ನಿಮ್ಮನ್ನು ಬಿಟ್ಟುಬಿಡುತ್ತೇವೆ. ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ. ಇದು ಇಡಿ ಅಧಿಕಾರಿಗಳು ವಾಲ್ಮೀಕಿ ನಿಗಮ ಹಗರಣದ ತನಿಖೆ ಎದುರಿಸುತ್ತಿರುವ ಅಧಿಕಾರಿಯ ಮೇಲೆ ಹೇರಿರುವ ಒತ್ತಡ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇರ ಆರೋಪ ಎಸಗಿದ್ದಾರೆ.

ತನಿಖಾ ಸಂಸ್ಥೆಗಳು ಕೇಂದ್ರದ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಬಿಜೆಪಿ ವಿರುದ್ಧ ಇರುವ ವಿರೋಧ ಪಕ್ಷಗಳ ನಾಯಕರು ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪಿತೂರಿ ನಡೆಸುತ್ತಿವೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಇದು ವಿರೋಧ ಪಕ್ಷಗಳ ನಾಯಕರನ್ನು ರಾಜಕೀಯವಾಗಿ ಮುಗಿಸುವ ವ್ಯವಸ್ಥಿತ ಷಡ್ಯಂತ್ರ. ಇದನ್ನು ನಾವು ಖಂಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆಲ್ಲ ನಾವು ಮಣಿಯುವುದಿಲ್ಲ. ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಈ ಷಡ್ಯಂತ್ರದಲ್ಲಿ ಭಾಗಿಯಾದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ದಿನೇಶ್ ಗುಂಡಾರಾವ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.