ನ್ಯೂಸ್

ಸ್ಮಾರ್ಟ್ ಸಿಟಿ ಕಾಮಗಾರಿಗಳ ತನಿಖೆಗೆ ಸಚಿವ ಬೈರತಿ ಸುರೇಶ ಸೂಚನೆ|investigate smart city works

ಬೆಂಗಳೂರು: ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆ ನಡೆಸಿ(investigate smart city works) ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ. ಎಸ್.ಸುರೇಶ (ಬೈರತಿ)(Bairati Suresh) ಸೂಚಿಸಿದ್ದಾರೆ.

ಸ್ಮಾರ್ಟ್ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಅಭಿಯಾನ ಆರಂಭವಾದಂದಿನಿಂದ ಇಲ್ಲಿಯವರೆಗೂ ರಾಜ್ಯದ 7 ಸ್ಮಾರ್ಟ್ ಸಿಟಿಗಳಲ್ಲಿ 6415.51 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆದಿದ್ದು, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಅಷ್ಟೊಂದು ತೃಪ್ತಿದಾಯಕವಾಗಿಲ್ಲವೆಂದು ತಿಳಿದು ಬಂದಿದೆ.

ಬೆಂಗಳೂರು ಹೊರತುಪಡಿಸಿ(877.82 ಕೋಟಿ ರೂ.ಕಾಮಗಾರಿ ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಪೂರ್ಣಗೊಂಡಿದ್ದು) ಇತರೆ 6 ಸ್ಮಾರ್ಟ್ ಸಿಟಿಗಳ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆ ಒಳಗೊಂಡಂತೆ ಸಮಿತಿ ರಚಿಸಿ ತನಿಖೆ ನಡೆಸಿ 3 ತಿಂಗಳ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ನಡೆದಿರುವ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನವನಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನ ಒದಗಿಸಲಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಸ್ಮಾರ್ಟ್ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್ ನಿಲ್ದಾಣ ಸೇರಿದಂತೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೆ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸರಿಯಾದ ಮಾರ್ಗವಲ್ಲವೆಂದು 6 ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಪ್ರತಿ ಸ್ಮಾರ್ಟ್ ಸಿಟಿಗೆ 990 ಕೋಟಿ

ಪ್ರತಿ ಸ್ಮಾರ್ಟ್ ಸಿಟಿಗೂ ಅಂದಾಜು 990 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಶೈಕ್ಷಣಿಕ ಶೇ.2, ಇಂಧನ ಶೇ.8, ಆರೋಗ್ಯ ಶೇ.2, ಮಾಹಿತಿ ತಂತ್ರಜ್ಞಾನಕ್ಕೆ ಶೇ.8 ರಷ್ಟು ಒಟ್ಟಾರೆ ಶೇ. 20 ರಷ್ಟು ಅನುದಾನವನ್ನು ಕೆರೆ ಮತ್ತು ಉದ್ಯಾನವನ ಶೇ.9 ರಷ್ಟು, ಮಾರುಕಟ್ಟೆ ಶೇ.5, ರಸ್ತೆ ನಿರ್ಮಾಣ ಶೇ.36, ಕ್ರೀಡಾ ವಲಯಕ್ಕೆ ಶೇ. 5, ಸಾರಿಗೆ ವ್ಯವಸ್ಥೆಗೆ ಶೇ. 8, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶೇ.18 ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವಲಯಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಅವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆದಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಹೀಗಾಗಿ ಒಟ್ಟಾರೆ ನಡೆದಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ತಿಳಿಸಿದರು.

ಉಳಿಕೆ ಮೊತ್ತ ಸ್ಮಾರ್ಟ್ ಶಾಲೆಗೆ ಬಳಕೆ

2025 ಮಾರ್ಚ್ ಅಂತ್ಯಕ್ಕೆ ಸ್ಮಾರ್ಟ್ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಾಗಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತರ್‌ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಶಾಲೆಗಳ ನಿರ್ಮಾಣಕ್ಕೆ ವಿನೀಯೋಗಿಸಬೇಕು. ಇದರಿಂದಾಗಿ ನಮ್ಮ ಬಡ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರೆಯಬೇಕು. ಇದಕ್ಕಾಗಿ ಅತ್ಯಾಧುನಿಕ ಕಲಿಕ ಸಾಮಗ್ರಿಗಳು ಸ್ಮಾರ್ಟ್ ಶಾಲೆಗಳಲ್ಲಿ ಒಳಗೊಳ್ಳಬೇಕು ಎಂದು ಹೇಳಿದರು.

ಸಮಿತಿ ರಚನೆಗೆ ಸಚಿವರ ಸೂಚನೆ

ಸ್ಮಾರ್ಟ್ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್ ಸಿಟಿಗಳಲ್ಲಿ ಇಲ್ಲಿಯವರೆಗೂ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲು ಸಮಿತಿಯೊಂದನ್ನು ರಚಿಸಲು ಕಾರ್ಯದರ್ಶಿಗೆ ಸೂಚಿಸಿದರಲ್ಲದೆ, ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ಅಭಿಯಂತರ ದರ್ಜೆಯ ಒರ್ವ ಅಧಿಕಾರಿ ಹಾಗೂ ಆಯಾ ಸ್ಮಾರ್ಟ್ ಸಿಟಿ ವ್ಯಾಪ್ತಿಗಳಲ್ಲಿ ಬರುವ ವಿಶ್ವ ವಿದ್ಯಾನಿಲಯದ ತಾಂತ್ರಿಕ ಪರಿಣಿತರು ಮತ್ತು ಇಂಡಿಯನ್ ಇನ್ಸಿಟ್ಯೂಟ್ ಆ್ ಸೈನ್ಸ್ ಸಂಸ್ಥೆಯಿಂದ ಒರ್ವ ಪರಿಣಿತಿ ತಜ್ಞರನ್ನು ಸಮಿತಿ ಒಳಗೊಳ್ಳಬೇಕು. ಅಗತ್ಯ ತನಿಖೆ ನಡೆಸಿ ಸಮಗ್ರ ವರದಿಯನ್ನು ಮೂರು ತಿಂಗಳ ಕಾಲಮಿತಿಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಬಿ.ಎಸ್.ಸುರೇಶ್ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಮುಖ್ಯ ಅಭಿಯಂತರ ನಂದೀಶ್, 6 ಸ್ಮಾರ್ಟ್ ಸಿಟಿಗಳ ವ್ಯವಸ್ಥಾಪಕ ನಿರ್ದೇಶಕರುಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.