ನ್ಯೂಸ್

ಅಕ್ರಮ ಗಣಿಗೆ ಕಂದಾಯ ಅಧಿಕಾರಿಗಳ ದಾಳಿ

ಎ. ಆರ್. ರಘುರಾಮ

ಬೆಟ್ಟದಪುರ: ಬೆಟ್ಟದತುಂಗ ಬಿಟಿಎಂ ಕೊಪ್ಪಲಿನ ಬೆಟ್ಟದ ತಪ್ಪಲಿನಲ್ಲಿರುವ ಗುರಾಣಿಕಟ್ಟೆ (ಮೇಗಳಕೆರೆ) ಬಳಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಗಣಿಗಾರಿಕೆಗೆ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಕುಂಞ ಅಹಮದ್ ಮೌಖಿಕ ಆದೇಶದ ಮೇರೆಗೆ ಬೆಟ್ಟದಪುರ ಹೋಬಳಿಯ ಕಂದಾಯ ನಿರೀಕ್ಷಕ ಅಜ್ಮಲ್ ಷರೀಫ್ ಹಾಗೂ ಗ್ರಾಮ ಆಡಳಿತಾಧಿಕಾರಿ ಕುಮುದಾ ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಶನಿವಾರ ದಾಳಿ ನಡೆಸಿದರು.
ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ 6 ಸುತ್ತಿಗೆ, 15 ಉಳಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದಲ್ಲಿ ಸುಮಾರು 12 ಲೋಡ್ ಸೈಜ್ ಕಲ್ಲುಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಅಕ್ರಮ ಗಣಿಗಾರಿಕೆ ನಡೆಸಿ ಗಣಿ ಉತ್ಪನ್ನ ಸಾಗಣೆ ಮಾಡದಂತೆ ಕಂದಾಯ ಇಲಾಖೆಯಿಂದ ಶನಿವಾರ ಕಾಲುವೆ ತೋಡಿಸಲಾಯಿತು. ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ಲಕ್ಷ್ಮೀ ಅರಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೇತನ್, ಕಾರ್ಯದರ್ಶಿ ಮಹದೇವ್, ಗ್ರಾಮಸ್ಥರಾದ ಪ್ರಕಾಶ್, ಮುಕುಂದ ಇತರರು ಇದ್ದರು.