ಲಂಡನ್: ಬಲವಂತದ ವಿವಾಹ ತಡೆಯಲು ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ವರ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ಕಾನೂನು ಸೋಮವಾರ ಜಾರಿಗೆ ಬಂದಿದೆ.
ಇದುವರೆಗೆ 16ರಿಂದ 17 ವರ್ಷ ವಯಸ್ಸಿನವರು ಪೋಷಕರ ಒಪ್ಪಿಗೆಯೊಂದಿಗೆ ಮದುವೆಯಾಗಬಹುದಿತ್ತು. ಆದರೆ, ಯುವಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಾಯಿಸುವುದರಿಂದ ರಕ್ಷಿಸಲು ಈ ಕಾನೂನು ರೂಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡಿದವರು 7 ವರ್ಷ ಜೈಲು ಅನುಭವಿಸಬೇಕಾಗುತ್ತದೆ.
ಬಲವಂತದ ಮದುವೆಗಳ ವಿರುದ್ಧ ಪ್ರಚಾರ ಮಾಡುತ್ತಿರುವ ದತ್ತಿ ಸಂಸ್ಥೆಗಳು ಹೊಸ ಕಾನೂನನ್ನು ಸ್ವಾಗತಿಸಿವೆ. ಬ್ರಿಟನ್ನಲ್ಲಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಜನಾಂಗಗಳು ಈ ರೀತಿಯ ಬಲವಂತದ ಮದುವೆಗೆ ಒಳಗಾಗುತ್ತಿದ್ದರು.
ಎಲ್ಲಿ ಎಷ್ಟು?
* ಚೀನಾ ಯುವಕರಿಗೆ 22, ಯುವತಿಯರಿಗೆ 21.
* ಅಮೆರಿಕದ ಬಹುತೇಕ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟು ಇದೆ.
* ಪ.ಆಫ್ರಿಕಾದಲ್ಲಿರುವ ನೈಜರ್ ದೇಶದಲ್ಲಿ ಬಾಲ್ಯ ವಿವಾಹ ಅಧಿಕೃತ.
* ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ನಲ್ಲಿ ವಧು-ವರರ ವಯಸ್ಸು 18.