ನ್ಯೂಸ್

ಪಾಲಿಟೆಕ್ನಿಕ್‌ಗಳಲ್ಲಿ ಕನಿಷ್ಠ 4 ಕೋರ್ಸ್‌ಗಳಿಗೆ ನಿಗದಿ

ಎನ್.ಎಲ್. ಶಿವಮಾದು

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ 2026-27ನೇ ಸಾಲಿನಿಂದ ಕನಿಷ್ಠ ನಾಲ್ಕು ಕೋರ್ಸ್‌ಗಳಿರಬೇಕೆಂಬ ನಿಯಮ ರೂಪಿಸಲು ತಾಂತ್ರಿಕ ಶಿಕ್ಷಣ ಇಲಾಖೆಯು ಮುಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹೊಸ ಕೋರ್ಸ್‌ಗಳನ್ನು ಆರಂಭಿಸಿ ಕಾಯಕಲ್ಪ ನೀಡಲು ಸಹ

ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ ಪ್ರಸ್ತುತ 109 ಸರ್ಕಾರಿ ಪಾಲಿಟೆಕ್ನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 21ಕ್ಕೂ ಹೆಚ್ಚಿನ ಪಾಲಿಟೆಕ್ನಿಕ್‌ಗಳಲ್ಲಿ ಮೂರು ಮತ್ತು ಮೂರಕ್ಕಿಂತ ಕಡಿಮೆ ಕೋರ್ಸ್‌ಗಳನ್ನು ಬೋಧನೆ ಮಾಡಲಾಗುತ್ತಿದೆ. ಕೇವಲ ಒಂದು ಮತ್ತು ಎರಡು ಕೋರ್ಸ್‌ಗಳನ್ನು ಬೋಧನೆ ಮಾಡುವುದರಿಂದ ಸರ್ಕಾರ ಮತ್ತು ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ.

ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೇತನ, ಪ್ರಯೋಗಾಲಯ ನಿರ್ವಹಣೆ, ಸಂಸ್ಥೆಯ ನಿರ್ವಹಣಾ ವೆಚ್ಚ ಸೇರಿ ಹಲವು ರೀತಿಯಲ್ಲಿ ಸರ್ಕಾರಕ್ಕೆ ನಷ್ಟ ಅನುಭವಿಸಿದರೆ, ಕೇವಲ ಒಂದು ಮತ್ತು ಎರಡು ಕೋರ್ಸ್‌ಗಳಿದ್ದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳಿಲ್ಲದೆ, ಶೈಕ್ಷಣಿಕವಾಗಿ ನಷ್ಟವಾಗಲಿದೆ ಎಂಬ ಚರ್ಚೆಗಳು ಇಲಾಖೆ ಹಂತದಲ್ಲಿ ನಡೆದಿದೆ.

ಹೊಸ ಕೋರ್ಸ್‌ಗಳಿಗೆ ಬೇಡಿಕೆ:

ಹೆಚ್ಚಿನ ಪಾಲಿಟೆಕ್ನಿಕ್‌ಗಳಲ್ಲಿ ಸಾಂಪ್ರದಾಯಿಕ ಕೋರ್ಸ್‌ಗಳಾದ ಸಿವಿಲ್, ಮೆಕಾನಿಕಲ್, ಕೆಮಿಕಲ್ ಡಿಪ್ಲೊಮೊ ಕೋರ್ಸ್‌ಗಳಿವೆ. ಆದರೆ, ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವುದರಿಂದ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಸೈಬರ್ ಭದ್ರತೆ, ಬ್ಲ್ಯಾಕ್ ಚೈನ್‌ನಂತಹ ತಂತ್ರಜ್ಞಾನವುಳ್ಳ ಹೊಸ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಬೇಡಿಕೆ ಇಡುತ್ತಿದ್ದಾರೆ. ಈ ಕೋರ್ಸ್‌ಗಳನ್ನು ಆರಂಭಿಸುವಂತೆಯೂ ಬೋಧಕ ಸಿಬ್ಬಂದಿಯಿಂದ ಒತ್ತಾಯಗಳು ಕೇಳಿಬರುತ್ತಿವೆ ಎನ್ನುತ್ತಾರೆ ತಾಂತ್ರಿಕ ಶಿಕ್ಷಣ ನಿರ್ದೇಶಕ ಎಚ್. ಪ್ರಸನ್ನ.

ಉನ್ನತೀಕರಣಕ್ಕೆ ಚಿಂತನೆ:

ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಆರ್ಥಿಕವಾಗಿ ಸಬಲರಾಗದ ವಿದ್ಯಾರ್ಥಿಗಳು ಡಿಪ್ಲೊಮೊ, ಐಟಿಐ ಮುಗಿಸಿ ಉದ್ಯೋಗ ಅರಸುವ ವಿದ್ಯಾರ್ಥಿಗಳಿಗಾಗಿ ಪಾಲಿಟೆಕ್ನಿಕ್‌ಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ಈಗಿನ ಪರಿಸ್ಥಿತಿ ನೋಡಿ ಕೇವಲ ಒಂದೆರಡು ಕೋರ್ಸ್‌ಗಳಿವೆ ಎಂದು ಮುಚ್ಚಿದರೆ ವಿದ್ಯಾರ್ಥಿಗಳಿಗೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಟೆಕ್ನಿಕ್‌ಗಳನ್ನು ಉನ್ನತೀಕರಿಸಿ ಅತ್ಯಾಧುನಿಕ ಕೋರ್ಸ್‌ಗಳನ್ನು ಪರಿಚಯಿಸುವುದು ಸರ್ಕಾರದ ಉದ್ದೇಶವಾಗಿದೆ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್.

16 ಕೋರ್ಸ್‌ಗಳಿರುವ ಏಕೈಕ ಪಾಲಿಟೆಕ್ನಿಕ್ ಎಸ್‌ಜೆಪಿ:

ರಾಜ್ಯದಲ್ಲಿ 109 ಸರ್ಕಾರಿ ಪಾಲಿಟೆಕ್ನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 16 ಕೋರ್ಸ್‌ಗಳನ್ನು ಬೋಧಿಸುತ್ಗಿರುವ ಏಕೈಕ್ ಪಾಲಿಟೆಕ್ನಿಕ್ ಎಂದರೆ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ (ಎಸ್‌ಜೆಪಿ) ಮಾತ್ರ.

ಇನ್ನುಳಿದಂತೆ ಮೂರು ಪಾಲಿಟೆಕ್ನಿಕ್‌ಗಳಲ್ಲಿ 8 ಕೋರ್ಸ್, 4 ಪಾಲಿಟೆಕ್ನಿಕ್‌ಗಳಲ್ಲಿ 7 ಕೋರ್ಸ್, 13 ಪಾಲಿಟೆಕ್ನಿಕ್‌ಗಳಲ್ಲಿ 6 ಕೋರ್ಸ್, 20ರಲ್ಲಿ 5 ಕೋರ್ಸ್, 45ರಲ್ಲಿ 4 ಕೋರ್ಸ್, 6ರಲ್ಲಿ 3 ಕೋರ್ಸ್, 12ರಲ್ಲಿ 2 ಕೋರ್ಸ್ ಮತ್ತು ಮೂರು ಪಾಲಿಟೆಕ್ನಿಕ್‌ಗಳಲ್ಲಿ ಕೇವಲ ಒಂದು ಕೋರ್ಸ್ ಅನ್ನು ಬೋಧಿಸಲಾಗುತ್ತಿದೆ.

ಮೂಲಸೌಕರ್ಯವಿರುವ ಕಡೆ ಉನ್ನತೀಕರಣ:

1961ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಪಾಲಿಟೆಕ್ನಿಕ್‌ಗಳನ್ನು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ರಾಜ್ಯಾದ್ಯಂತ ಪಾಲಿಟೆಕ್ನಿಕ್‌ಗಳು ಆರಂಬವಾದವು. ಕೆಲವು ಸಂಸ್ಥೆಗಳಲ್ಲಿ ಕಟ್ಟಡ, ಲ್ಯಾಬ್, ಬೋಧಕ ಸಿಬ್ಬಂದಿ ಸೇರಿ ಉತ್ತಮ ಮೂಲಸೌಕರ್ಯವಿದೆ. ಅಂತಹ ಕಡೆ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಸಂಸ್ಥೆಯ ಉನ್ನತೀಕರಣಕ್ಕೆ ಒತ್ತು ನೀಡಲು ಚರ್ಚೆ ನಡೆಸಲಾಗುತ್ತಿದೆ. ಬೋಧಕ ಸಿಬ್ಬಂದಿ ಸಿಬ್ಬಂದಿ ನೇಮಕದಲ್ಲಿಯೂ ಮೊದಲ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ.

2025-26ರಲ್ಲಿ ಪಾಲಿಟೆಕ್ನಿಕ್‌ಗಳಲ್ಲಿರುವ ಸೀಟುಗಳ ಪ್ರಮಾಣ/ಭರ್ತಿ

ಪಾಲಿಟೆಕ್ನಿಕ್‌ಗಳು ಸಂಖ್ಯೆ ಒಟ್ಟು ಸೀಟುಗಳು ಭರ್ತಿಯಾದ ಸೀಟುಗಳು

ಸರ್ಕಾಟಿ 109 26,730 17,324

ಅನುದಾನಿತ 42 12,103 8,702

ಖಾಸಗಿ 131 34,891 12,629

ಒಟ್ಟು 282 73,724 38,655

ಎಲ್ಲೆಲ್ಲಿ ಎಷ್ಟು ಕೋರ್ಸ್ ಬೋಧನೆ

ಪಾಲಿಟೆಕ್ನಿಕ್‌ಗಳು ಕೋರ್ಸ್

1 (ಎಸ್‌ಜೆಪಿ) 16

3 8

4 7

13 6

20 5

45 4

6 3

12 2

3 1

ತಾಂತ್ರಿಕ ಕ್ಷೇತ್ರದಲ್ಲಿ ಅತ್ಯಾಧುನಿಕ ಮತ್ತು ಬೇಡಿಕೆ ಕೋರ್ಸ್‌ಗಳನ್ನು ಪಾಲಿಟೆಕ್ನಿಕ್‌ಗಳಲ್ಲಿ ಆರಂಭಿಸುವ ಮೂಲಕ ಉನ್ನತೀಕರಣಕ್ಕೆ ಸರ್ಕಾರ ಚಿಂತನೆ ನಡೆಸಲಾಗುತ್ತಿದೆ. ಬೋಧಕ ಸಿಬ್ಬಂದಿಯಲ್ಲಿಯೂ ಮೊದಲ ಆದ್ಯತೆ ನೀಡಲಾಗುತ್ತದೆ.

- ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ