ಮನುಷ್ಯನ ಮನಸ್ಸು ರಸದ ತೊಟ್ಟಿಲೂ ಆಗಬಹುದು; ಕಸದ ತೊಟ್ಟಿಯೂ ಆಗಬಹುದು. ನಾವೆಷ್ಟು ಸಂತೋಷವಾಗಿದ್ದೇವೆ ಅನ್ನುವುದರ ಮೇಲೆ ಮಾತ್ರ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ, ನಮ್ಮಿಂದಾಗಿ ಎಷ್ಟು ಜನರು ಸಂತೋಷವಾಗಿದ್ದಾರೆ, ಉಪಕೃತರಾಗಿದ್ದಾರೆ ಅನ್ನುವುದರ ಮೇಲೆಯೇ ಜೀವನದ ಸಾರ್ಥಕತೆ (rises like a sight) ನಿರ್ಧಾರಗೊಳ್ಳುತ್ತದೆ.
ಒಂದು ಕಡೆ ಒಂದು ಬೃಹತ್ ಶಾಲಾ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿತ್ತು. ನಿರ್ಮಾಣ ಕಾಮಗಾರಿಯನ್ನು ಒಬ್ಬ ದೊಡ್ಡ ಬಿಲ್ಡಿಂಗ್ ಕಂಟ್ರಾಕ್ಟರ್ಗೆ ವಹಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ವಿುಕರು ಹಗಲಿರುಳು ದುಡಿಯುತ್ತಿದ್ದರು. ಶಾಲಾ ಕಟ್ಟಡದ ಪ್ರಗತಿ ಕಾರ್ಯವನ್ನು ವೀಕ್ಷಿಸುತ್ತಿದ್ದ ಒಬ್ಬ ನಾಗರಿಕ ಓರ್ವ ಕಾರ್ವಿುಕನನ್ನು ಕೇಳಿದ: ‘ಕೆಲಸ ಹೇಗೆ ನಡೆಯುತ್ತಿದೆಯಪ್ಪಾ? ಗುತ್ತಿಗೆದಾರ ನಿಮ್ಮ ದುಡಿಮೆಗೆ ತಕ್ಕುದಾದ ಒಳ್ಳೆಯ ಸಂಬಳವನ್ನು ನೀಡುತ್ತಿದ್ದಾನೆಯೇ?’
ಒಳ್ಳೆಯ ಸಂಬಳ ಎಲ್ಲಿ ಬಂತು ಸ್ವಾಮಿ?. ಇವರು ಕೊಡುವ ಕೂಲಿಗೆ ಬೆಳಗ್ಗಿನಿಂದ ಸಂಜೆವರೆಗೆ ದುಡಿದು ಸಾಯಬೇಕು. ಈ ಜುಜುಬಿ ದುಡ್ಡಿಗೆ ಇಷ್ಟೊಂದು ಕೆಲಸ ಯಾರು ಮಾಡ್ತಾರೆ ಹೇಳಿ? ನಮ್ಮಂತಹವರನ್ನು ದುಡಿಸಿ ಆ ಕಂಟ್ರಾಕ್ಟರ್ ಭಾರಿ ದುಡ್ಡು ಮಾಡ್ತಾ ಇರಬೇಕು. ನಮ್ಮ ಹಣೆಯಲ್ಲಿ ಕೆಲಸಮಾಡುವುದು, ಅವನ ಹಣೆಯಲ್ಲಿ ದುಡ್ಡು ಮಾಡುವುದು ಬರೆದಿದೆ ನೋಡಿ!’ ಇನ್ನೊಬ್ಬ ಕೂಲಿಯವನನ್ನೂ ಅವನ ಕೆಲಸದ ಬಗ್ಗೆ ಕೇಳಿದಾಗ ಆತ ಹೇಳಿದ: ‘ಈ ಕೆಲಸ ಕಾರ್ಯವನ್ನು ಶುರು ಮಾಡಿದವರು ಪುಣ್ಯಾತ್ಮರು ಸ್ವಾಮಿ. ನಮ್ಮಂತಹ ಸಾವಿರಾರು ನಿರುದ್ಯೋಗಿಗಳಿಗೆ ಕೈಗೊಂದು ಕೆಲಸ ಕೊಡಿಸಿ ನಮ್ಮ ಮನೆಗೆ ಬೆಳಕಾಗಿದ್ದಾರೆ. ಇವರು ಕೊಡುವ ಸಂಬಳದಿಂದ ನಾನು, ನನ್ನ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದೇನೆ. ನಾವೆಲ್ಲರೂ ಸಂತೋಷವಾಗಿದ್ದೇವೆ. ದೇವರು ಅವರನ್ನು ಚೆನ್ನಾಗಿ ಇಡಲಿ.’
‘ಇದೊಂದು ಪುಣ್ಯಕಾರ್ಯ ಸರ್. ಈ ಜಾಗದ ಮಾಲೀಕ ಆಸೆ ಪಟ್ಟಿದ್ದರೆ ಇಲ್ಲೊಂದು ವಾಣಿಜ್ಯ ಸಂಕೀರ್ಣವನ್ನೇ ನಿರ್ವಿುಸಿ, ಭಾರಿ ದುಡ್ಡು ಮಾಡಬಹುದಿತ್ತು. ಅಥವಾ ಒಂದು ದೇವಸ್ಥಾನವನ್ನು ನಿರ್ವಿುಸುತ್ತಿದ್ದರೆ ಅದು ಕೇವಲ ಹಿಂದುಗಳಿಗೆ ಮಾತ್ರ ಉಪಯೋಗಕ್ಕೆ ಬರುತ್ತಿತ್ತು. ಇಲ್ಲವೇ ಇಲ್ಲೊಂದು ಮಸೀದಿ ನಿರ್ವಣವಾಗುತ್ತಿದ್ದರೆ ಅದು ಮುಸ್ಲಿಮರಿಗೆ ಮಾತ್ರ ಶ್ರದ್ಧಾ ಕೇಂದ್ರವಾಗುತ್ತಿತ್ತು. ಇಲ್ಲವೇ ಇಗರ್ಜಿ ಒಂದರ ನಿರ್ವಣವಾಗುತ್ತಿದ್ದರೆ ಕೇವಲ ಕ್ರಿಶ್ಚಿಯನ್ನರ ಪೂಜಾ ಕೇಂದ್ರವಾಗುತ್ತಿತ್ತು. ಇದೆಲ್ಲದರ ಬದಲಾಗಿ ಈಗ ಇಲ್ಲೊಂದು ಶಾಲೆಯ ನಿರ್ವಣವಾಗುವುದರಿಂದ ಇದು ಜಾತಿ ಮತ ಭೇದವಿಲ್ಲದೆ ಸಮಾಜದ ಎಲ್ಲಾ ಮಕ್ಕಳ ಕಲಿಕಾ ಕೇಂದ್ರವಾಗಿ ಪವಿತ್ರ ಜಾಗವೆನಿಸಲಿದೆ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನನ್ನ ಪಾಲಿಗೆ ಬಂದದ್ದು ಸೌಭಾಗ್ಯವೇ ಸರಿ. ನನ್ನ ದುಡಿಮೆ ಸಾರ್ಥಕವಾಗುತ್ತಿದೆ.’
ಆದರೆ ಈ ಮೂವರು ಕಾರ್ವಿುಕರ ಮನೋಭಾವಗಳು ಮಾತ್ರ ಬೇರೆ ಬೇರೆ. ಒಬ್ಬನದು ನಕಾರಾತ್ಮಕ ಭಾವವಾದರೆ ಇನ್ನೊಬ್ಬನದು ಸಕಾರಾತ್ಮಕ. ಮತ್ತೊಬ್ಬನದು ಋಣಾತ್ಮಕ. ಮೊದಲನೆಯವನು ಗೊಣಗುತ್ತಾ, ಅತೃಪ್ತಿಯಿಂದ, ಅಸಂತೋಷದಿಂದ, ಸಂಶಯಾತ್ಮಕ ದೃಷ್ಟಿಯಿಂದ ಕೆಲಸ ಮಾಡಿದರೆ, ಎರಡನೆಯವನು ಕೃತಜ್ಞತಾ ಭಾವದಿಂದ ತೃಪ್ತಿಯ ಮನೋಭಾವದಿಂದ ದುಡಿಯುತ್ತಿದ್ದ. ಮೂರನೆಯವನಂತೂ ಕಾಯಕವೇ ಕೈಲಾಸ ಎಂಬಂತೆ ಓರ್ವ ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದ.
ಮನುಷ್ಯನ ಮನಸ್ಸು ರಸದ ತೊಟ್ಟಿಲೂ ಆಗಬಹುದು; ಕಸದ ತೊಟ್ಟಿಯೂ ಆಗಬಹುದು. ಚಿಲ್ಲರೆ ಕಾಸು ತುಂಬಿಕೊಂಡಷ್ಟೂ ಪರ್ಸ ಭಾರ. ಅಂತೆಯೇ ಚಿಲ್ಲರೆ ವಿಚಾರಗಳನ್ನು ತುಂಬಿಕೊಂಡಷ್ಟೂ ಮನಸ್ಸು ಭಾರ. ಆದುದರಿಂದ ನಮ್ಮ ವಿಚಾರಧಾರೆಗಳು ಉನ್ನತವಾಗಿರಲಿ ಉದಾತ್ತವಾಗಿರಲಿ. ಹುಟ್ಟುವಾಗ ಭಗವಂತ ನಮಗೆ ಮಕ್ಕಳಂತಹ ಮುಗ್ಧ, ಶುದ್ಧ, ನಿರ್ಮಲ, ನಿಷ್ಕಳಂಕ ಮನಸ್ಸನ್ನು ಕೊಟ್ಟ. ಆದರೆ ಬೆಳೆಯುತ್ತಾ ನಾವು ಅದನ್ನು ದುರಾಸೆ, ದುರಾಲೋಚನೆಗಳಿಂದ ರಾಡಿ ಮಾಡಿಕೊಂಡುಬಿಡುತ್ತೇವೆ. ಹುಟ್ಟುವಾಗ ಭಗವಂತ ಕೊಟ್ಟ ಮಕ್ಕಳಂತಹ ಮನಸ್ಸನ್ನೇ ಮುಂದುವರಿಸಿ ಅದರಂತೆ ಬಾಳಿ ಬದುಕಿ ಸಾಯುವುದರಲ್ಲಿಯೇ ಜೀವನದ ಸಂತೋಷ, ಸಂತೃಪ್ತಿ ಅಡಗಿದೆ.
ನಾವೆಷ್ಟು ಸಂತೋಷವಾಗಿದ್ದೇವೆ ಅನ್ನುವುದರ ಮೇಲೆ ಮಾತ್ರ ಜೀವನದ ಸಾರ್ಥಕತೆ ನಿರ್ಧಾರವಾಗುವುದಿಲ್ಲ; ನಮ್ಮಿಂದಾಗಿ ಎಷ್ಟು ಜನರು ಸಂತೋಷವಾಗಿದ್ದಾರೆ; ಉಪಕೃತರಾಗಿದ್ದಾರೆ ಅನ್ನುವುದರ ಮೇಲೆಯೇ ಜೀವನದ ಸಾರ್ಥಕತೆ ನಿರ್ಧಾರ ಗೊಳ್ಳುತ್ತದೆ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದು ನಮ್ಮ ಸೇವಕನಂತೆ; ಸ್ನೇಹಿತನಂತೆ. ಅದರ ನಿಯಂತ್ರಣದಲ್ಲಿ ನಾವಿದ್ದರೆ ಅದು ನಮ್ಮ ಶತ್ರುವಿನಂತೆ; ಮಾಲೀಕನಂತೆ. ಹೀಗಾಗಲು ಬಿಡಬಾರದು. ನಮ್ಮ ದೃಷ್ಟಿಯು ಚೆನ್ನಾಗಿರಲಿ, ದೃಷ್ಟಿಕೋನವೂ ಚೆನ್ನಾಗಿರಲಿ. ಅದು ಸಕಾರಾತ್ಮಕವಾಗಿರಲಿ, ವಿಶಾಲವಾಗಿರಲಿ.