ನ್ಯೂಸ್

ಕಲಾ ಸೇವೆಯಿಂದ ಮನಸ್ಸು ಸ್ಥಿಮಿತ: ಬಿ.ಎಲ್.ಸಂತೋಷ | Increase positive think

ಬೆಂಗಳೂರು: ನಿರಂತರವಾಗಿ ಒಂದೇ ಕೆಲಸದಲ್ಲಿ ತೊಡಗುವುದರಿಂದ ಮನಸ್ಸು ಅಸ್ವಸ್ಥ, ಭಾವ ವಿಕಾರವಾಗುತ್ತದೆ. ಕಲೆ, ಸಂಗೀತ, ಸೇವೆ ಮುಂತಾದ ಚಟುವಟಿಕೆಗಳಿಂದ ಮನಸ್ಸು ಸ್ಥಿಮಿತದಲ್ಲಿರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.

ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಇಂದು ಸಂಜೆ ನಡೆದ ‘ಜಗನ್ನಾಥ ಬಳಗ’ ಮತ್ತು ಬಿಜೆಪಿ ಸಾಂಸ್ಕøತಿಕ ಪ್ರಕೋಷ್ಠದ ‘ಮಾಸದ ಮಾಧುರ್ಯ’ 100 ರ ಸಂಭ್ರಮಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗನ್ನಾಥ ಭವನ ಸಾರ್ವಜನಿಕ ಚಟುವಟಿಕೆಗೆ ಬಳಕೆ ಆಗಬೇಕೆಂಬ ಉದ್ದೇಶದಿಂದ ‘ಮಾಸದ ಮಾಧುರ್ಯ’ ಕಾರ್ಯಕ್ರಮ ಆರಂಭಿಸಲಾಗಿದೆ. ಗಣೇಶ್ ಯಾಜಿ ಮತ್ತು ದತ್ತಗುರು ಹೆಗ್ಡೆ ಅವರು ಈ ಕಾರ್ಯಕ್ರಮದ ಜೊತೆ ಬಲವಾಗಿ ನಿಂತವರು ಎಂದು ಮೆಚ್ಚುಗೆ ಸೂಚಿಸಿದರು. 100 ತಿಂಗಳು ಬಿಡದೆ ಮಾಡುವುದು ವೃತದಂತೆ ಎಂದು ನುಡಿದರು.

ಮಲ್ಲೇಶ್ವರದ ಜಗನ್ನಾಥ ಭವನ ಇರುವ ಜಾಗ ದೈವಿಕ ಶಕ್ತಿಗಳಿರುವ ಪ್ರದೇಶ. ಉತ್ತಮ ಫುಡ್ ಕಾರ್ನರ್‍ ಗಳೂ ಇಲ್ಲಿವೆ ಎಂದು ವಿವರಿಸಿದರು. ನಮ್ಮ ಸುತ್ತಲಿನ ಜನರು ನಮ್ಮ ಜೊತೆ ಜೋಡಿಸಲು ಇದು ಪೂರಕವಾಗಿದೆ ಎಂದು ತಿಳಿಸಿದರು. ಮಾಸದ ಮಾಧುರ್ಯ ಸದಭಿರುಚಿಯನ್ನು ಹುಟ್ಟು ಹಾಕಿದೆ ಎಂದು ಹೇಳಿದರು.

ಆತ್ಮೀಯ ವಾತಾವರಣ

ಜನಸಾಮಾನ್ಯರು, ಪೊಲೀಸರನ್ನು ನಾವು ದೂರ ಇಟ್ಟಿಲ್ಲ; ಜಾತ್ರೆಗಳು ನಡೆದಾಗ ನಮ್ಮ ಕಾರ್ಯಾಲಯ ತೆರೆದ ಬಾಗಿಲು. ಬೇರೆ ರಾಜ್ಯದ ಕಾರ್ಯಾಲಯಗಳಿಗೆ ಹೋಲಿಸಿದರೆ ಜಗನ್ನಾಥ ಭವನ ಸಣ್ಣದಾದರೂ ಅಲ್ಲಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಕಾರಣಕ್ಕೆ ಆತ್ಮೀಯ ವಾತಾವರಣ ಇದೆ ಎಂದು ಬಿ.ಎಲ್.ಸಂತೋಷ ವಿಶ್ಲೇಷಿಸಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ನೃತ್ಯ ಮತ್ತು ಸಂಗೀತಕ್ಕೆ ಒತ್ತು ಕೊಟ್ಟ ಸಂಸ್ಕೃತಿ ಹಿಂದು ಸಂಸ್ಕೃತಿ. ನಮ್ಮ ದೇವದೇವತೆಗಳೂ ನೃತ್ಯ ಮತ್ತು ಸಂಗೀತಕ್ಕೆ ಮಾರು ಹೋದವರು ಎಂದರು.

ಹಾಗಾಗಿ ದೇವರ ಕಾರ್ಯಗಳಲ್ಲಿ ಸಂಗೀತವನ್ನು ಜೋಡಿಸಿದ್ದಾರೆ ಎಂದು ವಿವರಿಸಿದರು. ಭಾರತೀಯ ಸಂಗೀತವು ಮನಸ್ಸುಗಳನ್ನು ಅರಳಿಸುವ ಶಕ್ತಿ ಪಡೆದಿದೆ ಎಂದು ಹೇಳಿದರು.

ಮಾಜಿ ಸಚಿವ ಡಾ. ಸಿ.ಎನ್. ಅಶ್ವಥನಾರಾಯಣ, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ರಾಜ್ಯ ಖಜಾಂಚಿ ಸುಬ್ಬನರಸಿಂಹ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಮಾಸದ ಮಾಧುರ್ಯ ಕಾರ್ಯಕ್ರಮದ ಸಂಚಾಲಕ ದತ್ತಗುರು ಹೆಗಡೆ, ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಠದ ರಾಜ್ಯ ಸಂಚಾಲಕಿ ಶ್ರೀಮತಿ ರೂಪ ಅಯ್ಯರ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.