ನ್ಯೂಸ್

ನಾಳೆಯಿಂದ ಹಾಲು ದರ ಏರಿಕೆ: ಶಿಮುಲ್‌ನಿಂದ ಪಟ್ಟಿ ಬಿಡುಗಡೆ

ಶಿವಮೊಗ್ಗ: ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಹೆಚ್ಚಳ ಮಾಡಲಾಗಿದ್ದು, ಏ.1ರಿಂದ ನೂತನ ದರ ಜಾರಿಗೆ ಬರಲಿದೆ. ಈ ಸಂಬಂಧ ಶಿಮುಲ್ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ) ನೂತನ ದರ ಪಟ್ಟಿ ಪ್ರಕಟಿಸಿದೆ.

ಕರ್ನಾಟಕ ಹಾಲು ಮಹಾಮಂಡಳದ ಸಭೆಯಲ್ಲಿ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ ನೇತತ್ವದಲ್ಲಿ ನಡೆದ 455ನೇ ಆಡಳಿತ ಮಂಡಳಿ ಸಭೆಯಲ್ಲಿ ದರ ಹೆಚ್ಚಳದ ತೀರ್ಮಾನ ಪ್ರಕಟಿಸಲಾಗಿದೆ.

ಪ್ರಸ್ತುತ ಶಿಮುಲ್‌ನಿಂದ ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಕೆ.ಜಿ ಹಾಲಿಗೆ 34.18 ರೂ. ನೀಡಲಾಗುತ್ತಿದೆ. ಸಂಘಗಳು ಹಾಲು ಉತ್ಪಾದಕರಿಗೆ ಪ್ರತಿ ಕೆಜಿಗೆ 32.22 ರೂ. ನೀಡುತ್ತಿವೆ. ಏ. 1ರಿಂದ ನೂತನ ದರ ಜಾರಿಗೆ ಬರಲಿದೆ. ಬಳಿಕ ಶಿಮುಲ್‌ನಿಂದ ಹಾಲು ಉತ್ಪಾದಕರ ಸಂಘಗಳಿಗೆ 36.26 ರೂ. ನೀಡಲಾಗುತ್ತದೆ. ಸಂಘಗಳಿಂದ ಹಾಲು ಉತ್ಪಾದಕರಿಗೆ ಪ್ರತಿ ಕೆ.ಜಿಗೆ 34.21 ರೂ. ನೀಡಲು ಆದೇಶಿಸಲಾಗಿದೆ.

ಏ.1ರಿಂದ ಹಾಲು, ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೆಟ್‌ಗಳ ದರ ಹೆಚ್ಚಳವಾಗಲಿದೆ. ನಂದಿನಿಯ ವಿವಿಧ ಶ್ರೇಣಿಯ ಹಾಲಿನ ಒಂದು ಲೀಟರ್ ಮತ್ತು ಅರ್ಧ ಲೀಟರ್ ಪ್ಯಾಕ್‌ನೊದಿಗೆ ನೀಡಲಾಗುತ್ತಿದ್ದ 50 ಮಿಲೀ ಹೆಚ್ಚುವರಿ ಪ್ರಮಾಣಕ್ಕೆ ಅನ್ವಯವಾಗುವಂತೆ 2 ರೂ. ಹೆಚ್ಚುವರಿ ದರವನ್ನು ಹಿಂಪಡೆಯಲಾಗಿದೆ.

ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಹೆಚ್.ಎಸ್.ವಿದ್ಯಾಧರ, ಉಪಾಧ್ಯಕ್ಷ ಚೇತನ್ ಎಸ್.ನಾಡಿಗೇರ್, ನಿರ್ದೇಶಕರಾದ ಡಿ.ಆನಂದ್, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಜಿ.ಪಿ.ರೇವಣಸಿದ್ದಪ್ಪ, ಎಚ್.ಕೆ.ಬಸಪ್ಪ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ, ಜಿ.ಬಿ.ಶೇಖರಪ್ಪ, ಎಸ್.ಕುಮಾರ್, ಸಹಕಾರ ಸಂಘಗಳ ಜಂಟಿ ನಿಬಂಧಕರ ಪ್ರತಿನಿಧಿ ನಾಗಭೂಷಣ ಕಲ್ಮನೆ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಬಾಬುರತ್ನ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಭಾಗವಹಿಸಿದ್ದರು.