ನ್ಯೂಸ್

ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬಂಧನ

ನಂಜನಗೂಡು: ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ತಿಳಿ ಹೇಳಿದ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷನ ಮೇಲೆ ಗಂಭೀರ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣವಾಗಿದ್ದ ಕಾರ್ಯದರ್ಶಿಯನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ನಂಜನಗೂಡು ತಾಲೂಕಿನ ಇಬ್ಜಾಲ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ಬಂಧಿತ ಆರೋಪಿ. ಈತ ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದಾನೆ ಎಂದು ಆತನ ತಾಯಿ ರವಿಯಮ್ಮಗೆ ಸಂಘದ ಉಪಾಧ್ಯಕ್ಷರಾಗಿದ್ದ ಮಹದೇವನಾಯಕ ದೂರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಶಿವು ಉಪಾಧ್ಯಕ್ಷ ಮಹದೇವನಾಯಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ.


ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹದೇವ ನಾಯಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಪತಿಯ ಸಾವಿಗೆ ಕಾರ್ಯದರ್ಶಿ ಶಿವು ಕಾರಣ ಎಂದು ಪತ್ನಿ ಕಮಲಮ್ಮ ದೂರು ನೀಡಿದ್ದರು. ಇದೀಗ ಹುಲ್ಲಹಳ್ಳಿ ಠಾಣೆ ಪೊಲೀಸರು ನಾಪತ್ತೆಯಾಗಿದ್ದ ಕಾರ್ಯದರ್ಶಿ ಶಿವು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.