ನ್ಯೂಸ್

VIDEO: ದೆಹಲಿ ಆನಂದ್ ವಿಹಾರ್​ ಬಸ್​ ಸ್ಟ್ಯಾಂಡ್​​ ನಲ್ಲಿ ವಲಸೆ ಕಾರ್ಮಿಕರ ದಂಡು...ಸ್ವಂತ ಊರಿಗೆ ಹೋಗುವ ತವಕ, ಕರೊನಾ ಭಯ...

ನವದೆಹಲಿ: ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಹೀಗೆ ಲಾಕ್​ಡೌನ್ ಆಗಿದ್ದೇ ಆಗಿದ್ದು ಅನೇಕರಿಗೆ ತೊಂದರೆಯಾಗಿದೆ. ಅದರಲ್ಲೂ ಹೊಟ್ಟೆಪಾಡಿಗಾಗಿ ತಮ್ಮ ಸ್ವಂತ ಊರು ಬಿಟ್ಟು ಬೇರೆ ಕಡೆ ಹೋಗಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಾರ್ಚ್​ 24ರ ಮಧ್ಯರಾತ್ರಿ ಲಾಕ್​ಡೌನ್ ಆದಾಗಿನಿಂದಲೂ ದೇಶದ ವಿವಿಧ ವಲಸೆ ಕಾರ್ಮಿಕರು ಗುಂಪುಗುಂಪಾಗಿ ನಡೆದುಕೊಂಡೇ ತಮ್ಮ ಸ್ವಂತ ಊರಿಗೆ ಹೊರಟಿದ್ದಾರೆ. ಹಾಗೇ ಒಂದಷ್ಟು ಕಡೆ ಸಿಕ್ಕ ವಾಹನಗಳನ್ನು ಹತ್ತಿಕೊಂಡು ತೆರಳುತ್ತಿದ್ದಾರೆ.

ಲಾಕ್​ಡೌನ್​ ಆಗಿ ಮೂರು ದಿನವಾದರೂ ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ. ಶನಿವಾರ ದೆಹಲಿಯ ಆನಂದ್​ ವಿಹಾರ್​ ಬಸ್​ ಟರ್ಮಿನಲ್​ ಅಂತೂ ಈ ಕೆಲಸಗಾರರಿಂದಲೇ ತುಂಬಿಹೋಗಿತ್ತು. ಸ್ವಂತ ಊರುಗಳಿಗೆ ತೆರಳಲು ಇಲ್ಲಿಗೆ ಅಪಾರಸಂಖ್ಯೆಯಲ್ಲಿ ವಲಸಿಗರು ಆಗಮಿಸಿದ್ದರು.

ತಮ್ಮ ಊರುಗಳಿಗೆ ತೆರಳಲು ಬಸ್​ ಸಿಗಬಹುದೇನೋ ಎಂಬ ಆಸೆಯಿಂದ ಆಗಮಿಸಿದ್ದ ದಿನಗೂಲಿ ಕೆಲಸಗಾರರು, ವಲಸೆ ಕಾರ್ಮಿಕರಿಗೆ ಒಂದೆಡೆ ಕರೊನಾ ವೈರಸ್ ಭಯವಾದರೆ, ಮತ್ತೊಂದೆಡೆ ಊರು ತಲುಪಿಕೊಳ್ಳುವ ತವಕ. ಅಲ್ಲಿಗೆ ಗುಂಪು ಸೇರಲು ಅವಕಾಶ ಕೊಡಬಾರದು ಎಂಬ ಸರ್ಕಾರದ ಆದೇಶ ಸಂಪೂರ್ಣ ಉಲ್ಲಂಘನೆಯಾದಂತಾಗಿದೆ.

ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಅನೇಕರು ತಮ್ಮ ಚೀಲಗಳೊಂದಿಗೆ, ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಆನಂದ್​ ವಿಹಾರ್​ ಅಂತಾರಾಜ್ಯ ಬಸ್​ ಟರ್ಮಿನಲ್​ಗೆ ಆಗಮಿಸಿದ್ದರು. ಬಸ್​ಗಾಗಿ ಕಾಯುತ್ತಿದ್ದರು. ಇಂತಹ ವಲಸೆ ಕಾರ್ಮಿಕರಿಗಾಗಿ ಉತ್ತರ ಪ್ರದೇಶ ಸರ್ಕಾರ ಸುಮಾರು 1000 ಬಸ್​​ಗಳ ವ್ಯವಸ್ಥೆ ಮಾಡಿದೆ. (ಏಜೆನ್ಸೀಸ್​)