ನ್ಯೂಸ್

ಊರು ಸೇರಲು ಹೊರಟ ವಲಸೆ ಕಾರ್ಮಿಕ ದಂಪತಿ ಹೋದದ್ದು ಮಸಣಕ್ಕೆ...!

ಲಖನೌ: ಸ್ವಂತ ಊರು ಸೇರಲು ಸೈಕಲ್ ಮೂಲಕ ಹೊರಟ ಛತ್ತೀಸಗಢದ ವಲಸೆ ಕಾರ್ಮಿಕ ಹಾಗೂ ಆತನ ಪತ್ನಿ ಅಪಘಾತಕ್ಕೀಡಾಗಿ ಗುರುವಾರ ಮೃತಪಟ್ಟಿದ್ದಾರೆ.

ಕೃಷ್ಣಾ ಸಾಹು (45) ಹಾಗೂ ಆತನ ಪತ್ನಿ ಪ್ರಮೀಳಾ (40)ಮೃತರು.

ಮೂಲತಃ ಛತ್ತೀಸಗಢದ ಕೃಷ್ಣಾ ಲಖನೌನಲ್ಲಿ ದಿನಗೂಲಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲಿಯೇ ಕುಟುಂಬದೊಂದಿಗೆ ವಾಸವಾಗಿದ್ದ.

ಗುರುವಾರ ಮಧ್ಯರಾತ್ರಿ 1.30 ಕ್ಕೆ ಬೈಪಾಸ್ ರಸ್ತೆಯ ಶಾಹೀದ್ ಪಥದಲ್ಲಿ ಅಪಘಾತ ಸಂಭವಿಸಿದ್ದಾಗಿ ಲಖನೌ ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ದಂಪತಿಯ ಐದು ವರ್ಷದೊಳಗಿನ ಇಬ್ಬರು ಮಕ್ಕಳು ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗುತ್ತಿದೆ.

ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು. ಡಿಕ್ಕಿ ಹೊಡೆದ ವಾಹನ ಹಾಗೂ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಲಾಕ್​ಡೌನ್​ನಿಂದಾಗಿ ಕೆಲಸ, ಊಟ, ಹಣ ಹಾಗೂ ಆಶ್ರಯವಿಲ್ಲದೇ ಹತಾಶರಾಗಿದ್ದ ಕಾರ್ಮಿಕರು ಸಾವಿರಾರು ಕಿ.ಮೀ. ದೂರದ ತಮ್ಮ ಊರುಗಳಿಗೆ ಸೈಕಲ್ ಅಥವಾ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ ಎನ್ನಲಾಗಿದೆ.

ದೆಹಲಿಯಂತಹ ದೊಡ್ಡ ನಗರಗಳಿಂದ ವಲಸೆ ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗಲು ಶ್ರಮ ಪಡಬೇಕಾಗಿಲ್ಲ, ವಲಸಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.