ನ್ಯೂಸ್

ಒಂದೇ ವರ್ಷದಲ್ಲಿ 3ನೇ ವಜಾ ಪ್ರಕ್ರಿಯೆಗೆ ಮೈಕ್ರೋಸಾಫ್ಟ್​ ಸಜ್ಜು! ಕಾರಣ ಬಹಿರಂಗ, ಉದ್ಯೋಗಿಗಳಿಗೆ ಮತ್ತೇ ಸಂಕಷ್ಟ | Microsoft Layoffs

ಮೋಹನ್​ ಶೆಟ್ಟಿ

Microsoft Layoffs: ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗೆ ಇದೀಗ ಹೆಸರಾಂತ ಟೆಕ್​ ಸಂಸ್ಥೆ ಮೈಕ್ರೋಸಾಫ್ಟ್ ಸಜ್ಜಾಗಿದೆ. ಈ ಕಟು ನಿರ್ಧಾರದ ಮೂಲಕ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಆಘಾತ ತಂದೊಡ್ಡಿದೆ. ಭಾರಿ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿರುವ ಮೈಕ್ರೋಸಾಫ್ಟ್, ಬರೋಬ್ಬರಿ ಸಾವಿರಕ್ಕೂ ಅಧಿಕ ನೌಕರರಿಗೆ ಗುಡ್​ಬೈ ಹೇಳಲು ಎದುರುನೋಡುತ್ತಿದೆ. ಸಂಸ್ಥೆಯ ಈ ನಿರ್ಣಯಕ್ಕೆ ಬಲವಾದ ಕಾರಣವೂ ಇದೆ.

'ಮೈಕ್ರೋ' ಕಾರಣ

ಇದಕ್ಕೆ ಕಾರಣ ಏನೆಂದರೆ ಕಂಪನಿಯು ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ನಲ್ಲಿ ಹೆಚ್ಚುವರಿ ಹೂಡಿಕೆ ಮಾಡಿದೆ. ಇದು ಸಂಸ್ಥೆಗೆ ಆರ್ಥಿಕ ಒತ್ತಡ ಹೇರಿದೆ. ಈ ಎಲ್ಲಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡಿರುವ ಮೈಕ್ರೋಸಾಫ್ಟ್​, ತನ್ನ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಎಐ ಸಲುವಾಗಿ ಗೇಟ್​ಪಾಸ್ ಕೊಡಲು ನಿರ್ಧರಿಸಿದೆ. ಈ ಸುತ್ತಿನ ವಜಾಗಳು ಅತೀ ಮುಖ್ಯವಾಗಿ ಸೇಲ್ಸ್​ ತಂಡವನ್ನೇ ಗುರಿಯಾಗಿರಿಸಿಕೊಂಡಿವೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಮಾಹಿತಿಯ ಪ್ರಕಾರ, ವಜಾ ಪ್ರಕ್ರಿಯೆ ಇದೇ ಜುಲೈ ತಿಂಗಳಲ್ಲಿ ನಡೆಯಲಿವೆ ಎಂದು ಹೇಳಲಾಗಿದೆ.

ಸೇಲ್ಸ್ ಟೀಮ್​ ಟಾರ್ಗೆಟ್​!

ಈ ಹಂತದ ವಜಾಗಳು ಮಾರಾಟ ತಂಡಗಳ ಮೇಲೆ ಪರಿಣಾಮ ಬೀರಲಿವೆ. ಆದರೆ, ಇತರ ಇಲಾಖೆಗಳಲ್ಲಿಯೂ ಕಡಿತಗಳಿರುತ್ತವೆ ಎನ್ನಲಾಗಿದೆ. ಉದ್ಯಮ ಸ್ಪರ್ಧೆಯನ್ನು ನಿಭಾಯಿಸಲು, ಕಂಪನಿಯು ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಸೇವೆಗಳನ್ನು ಹೆಚ್ಚು ಬಳಸಲು ನಿರ್ಧರಿಸಿದೆ. ಈ ಹಿನ್ನಲೆ ಮೈಕ್ರೋಸಾಫ್ಟ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಹೂಡಿಕೆಗಳ ಮೇಲೆ ಕೇಂದ್ರೀಕರಿಸಿದೆ. ಮೈಕ್ರೋಸಾಫ್ಟ್ ಪ್ರಸ್ತುತ ಹಣಕಾಸು ವರ್ಷಕ್ಕೆ 80 ಬಿಲಿಯನ್ ಡಾಲರ್ ಬಂಡವಾಳ ವೆಚ್ಚವನ್ನು ಯೋಜಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಎಐ ಮೂಲಸೌಕರ್ಯವನ್ನು ಬೆಂಬಲಿಸಲು ಡೇಟಾ ಕೇಂದ್ರಗಳನ್ನು ನಿರ್ಮಿಸಲು ವ್ಯಯಿಸಲಿದೆ.

10,000 ಉದ್ಯೋಗಿಗಳಿಗೆ ಗೇಟ್​ಪಾಸ್​

ಈ ವರ್ಷ ಮೈಕ್ರೋಸಾಫ್ಟ್‌ನ ವಜಾಗೊಳಿಸುವಿಕೆಗಳು ಹೆಚ್ಚಾಗಿ ಉತ್ಪಾದನೆ ಮತ್ತು ಇಂಜಿನಿಯರಿಂಗ್‌ನಲ್ಲಿವೆ. ಕಂಪನಿಯು ಈಗಾಗಲೇ ಸುಮಾರು 6,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಆದರೆ, ಈ ಬಾರಿ ಸೇಲ್ಸ್​ ಮತ್ತು ಮಾರ್ಕೆಟಿಂಗ್‌ನಂತಹ ಗ್ರಾಹಕ-ಮುಖಿ ವಿಭಾಗಗಳ ಮೇಲೆ ಕೇಂದ್ರೀಕರಿಸಿದೆ. ಇದೇ ಮೈಕ್ರೋಸಾಫ್ಟ್ 2023ರಿಂದ ಸುಮಾರು 10,000 ಉದ್ಯೋಗಿಗಳನ್ನು ಇಲ್ಲಿಯವರೆಗೆ ಹೊರಗಟ್ಟಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).