ಅಣುವಿನಷ್ಟು ಚಿಕ್ಕ ತೇಜಃಕಣಗಳ ರೂಪದಲ್ಲಿ ಸಮಷ್ಟಿ ಜೀವನು ತನ್ನನ್ನು ಭಾವನೆ ಮಾಡಿಕೊಂಡಿದ್ದರಿಂದ ಅತ್ಯಂತ ಪರಿಮಿತವುಳ್ಳ ವ್ಯಷ್ಟಿ ಜೀವಗಳು ಉದಯಿಸುತ್ತವೆ. ಅವುಗಳ ಸ್ವರೂಪವು ಮೂಲತಃ ವ್ಯಾಪಕವಾಗಿದ್ದರೂ ಅನಾದಿ ವಾಸನೆಗಳ ಕಾರಣದಿಂದ ತಮ್ಮನ್ನು ಅಣುವಿನಂತೆ ಚಿಕ್ಕ ಸ್ವರೂಪದಲ್ಲೇ ನೋಡಿಕೊಳ್ಳುತ್ತಿವೆ. ಹೀಗೆ ತನ್ನನ್ನು ಚಿಕ್ಕದಾಗಿ ಗುರುತಿಸಿಕೊಳ್ಳುವಿಕೆಯೇ ಜೀವಭಾವ. ಈಗ ನಾವೆಲ್ಲ ಶರೀರಭಾವದಲ್ಲಿದ್ದೇವೆ. ಆದರೆ ಮರಣಾನಂತರ ಆ ಅಣುವಿನಂಥ ಚಿಕ್ಕ ಶರೀರವೇ ಇರುತ್ತದೆ, ಅದನ್ನೇ ತಾನೆಂದು ಜೀವ ಗುರುತಿಸಿಕೊಳ್ಳುತ್ತಾನೆ. ಸಾಧನೆಯ ಮೂಲಕ ದೇಹಭಾವ ಕಳೆದುಕೊಂಡಾಗ ಜೀವಭಾವ ಉಳಿಯುತ್ತದೆ ಮತ್ತು ಸಾಧನೆ ಮುಂದುವರಿದಾಗ ಸಮಷ್ಟಿ ಜೀವಭಾವ, ಅದಕ್ಕಿಂತ ಮುಂದೆ ಬ್ರಹ್ಮಭಾವ.
ಏಕೆಂದರೆ ‘ಚಿತ್ತಂ ಚೇತ್ಯಾರ್ಥತಾಮಿವ’ - ಚಿತ್ತವು ತನ್ನನ್ನು ತಾನು ವಿಷಯಗಳಂತೆ ತೋರಿಕೊಳ್ಳುತ್ತದೆ. ತನ್ನಲ್ಲಿರುವ ವಾಸನೆಗಳಿಗನುಸಾರ ಅದು ವಿಷಯಾಕಾರಗಳನ್ನು ತೆಗೆದುಕೊಳ್ಳುತ್ತದೆ. ಆ ವಾಸನೆಗಳೆಲ್ಲ ಸಂಕುಚಿತ ದೃಷ್ಟಿಯವುಗಳಾದ್ದರಿಂದ ತನ್ನ ಸ್ವರೂಪವನ್ನು ಸಂಕುಚಿತವೆಂದು ಭಾವಿಸುತ್ತ ಅದೇ ಶರೀರದಲ್ಲೇ ವ್ಯಷ್ಟಿ ಜೀವಗಳು ಸ್ವಪ್ನಾದಿ ವಾಸನಾಮಯ ದೃಶ್ಯಗಳನ್ನು ನೋಡುತ್ತ ಸಂಸಾರದಲ್ಲಿ ಮುಳುಗಿರುತ್ತವೆ.
ಇದನ್ನು ಹೇಳುವ ಮೂಲಕ ವಸಿಷ್ಠರ ಉಪದೇಶ ಮುಂದುವರಿಯುತ್ತಿದೆ. ‘ಶ್ರೀರಾಮ! ಸ್ವಪ್ನ ಮತ್ತು ಕಲ್ಪನಾಲೋಕದಲ್ಲಿ ಮುಳುಗಿರುವ ಅತ್ಯಂತ ಚಿಕ್ಕವನಾದ ಮತ್ತು ಚೈತನ್ಯಸ್ವರೂಪಿ ಜೀವನು ತನ್ನ ಅಣುಗಾತ್ರದ ಶರೀರದಲ್ಲೇ ವಾಸನಾಮಯ ವಿಷಯಗಳನ್ನು ನೋಡುತ್ತಾನೆ. ನಕ್ಷತ್ರದಂತಿರುವ ಚಿಕ್ಕ ಶರೀರದಲ್ಲಿದ್ದೇ ಅವನು ತಾನೇ ಸ್ವತಃ ಸ್ವತಂತ್ರ ಚೈತನ್ಯದಂತಿರುತ್ತಾನೆ. ಹಿಂದೆ ಹೇಳಿದ ವಾಸನಾಮಯ ಸೂಕ್ಷ್ಮಶರೀರ ದೃಷ್ಟಿಯಿಂದ ಅವನನ್ನು ನೋಡಿದರೆ ಬುದ್ಧಿ ಚಿತ್ತಾದಿಗಳಾಗಿಯೇ ತೋರುತ್ತಾನೆ. ಪರಮಾರ್ಥದೃಷ್ಟಿಯಿಂದ ನೋಡಿದರೆ ಸತ್, ಚಿತ್, ಆನಂದಸ್ವರೂಪಿಯಾಗಿ ಕಾಣುತ್ತಾನೆ. ಇಂಥ ಜೀವಾಕಾಶನು (ಆಕಾಶಸ್ವರೂಪದ ಜೀವ) ಹೇಗೆ ಜಾಗ್ರದವಸ್ಥೆ ಪಡೆಯುತ್ತಾನೆಂದು ಹೇಳುತ್ತೇನೆ. (ಈ ತನಕ ಸೂಕ್ಷ್ಮಶರೀರದ ಮೂಲಕವೇ ವ್ಯವಹರಿಸುತ್ತಿರುವುದರಿಂದ ಈ ತನಕದ ವ್ಯವಹಾರಗಳೆಲ್ಲ ಸ್ವಪ್ನಾವಸ್ಥೆಯವುಗಳೇ ಆಗಿದ್ದವು.) ಆ ಜೀವಾಕಾಶ ತಾನಾಗಿ ಹೊರಗೆ ನೋಡುತ್ತೇನೆಂಬ ಭಾವನೆಯಿಂದ ಹೊರಗಿನ ಆಕಾಶದಲ್ಲಿ ದೃಷ್ಟಿ ಹೊರಹಾಕುವಂತೆ ಗಮನ ಹರಿಸುತ್ತಾನೆ. ಆಗ ಅವನಿಗೆ ಉಂಟಾದ ಎರಡು ರಂಧ್ರಗಳಿಂದಲೇ ಮುಂದೆ ಬರಲಿರುವ ಬಾಹ್ಯಸ್ಥೂಲ ವಿಷಯಗಳನ್ನು ನೋಡುತ್ತಾನೆ. ಯಾವ ಎರಡು ರಂಧ್ರಗಳಿಂದ ಜೀವಾಕಾಶನು ನೋಡಿದನೋ ಅವೇ ಮುಂದೆ ಕಣ್ಣುಗಳೆಂಬ ಹೆಸರು ಪಡೆಯಲಿವೆ. ಮುಂದೆ ಸ್ಥೂಲಶರೀರ ಬಂದ ನಂತರ ಸೂಕ್ಷ್ಮಶರೀರದ ಈ ರಂಧ್ರದ್ವಯಗಳೇ ಕಣ್ಣುಗುಡ್ಡೆಗಳಲ್ಲಿ ಕೆಲಸಮಾಡುವ ಮೂಲಕ ಚಕ್ಷುರಿಂದ್ರಿಯವೆಂಬ ಹೆಸರು ಪಡೆಯುತ್ತವೆ.
ಯಾವ ಸಂಕಲ್ಪದಿಂದ ಅವನು ಸ್ಪರ್ಶಜ್ಞಾನ ಪಡೆಯಬೇಕೆಂದು ಸ್ಪಂದಿಸಿದನೋ ಅದೇ ಸಂಕಲ್ಪದಿಂದ ಅದೇ ಸ್ಪಂದನೆ ಸ್ಪರ್ಶನೇಂದ್ರಿಯವಾಯಿತು. ಮುಂದೆ ಸ್ಥೂಲಶರೀರದಲ್ಲಿ ಅದು ಚರ್ಮದಲ್ಲಿ ಸೇರಿಕೊಳ್ಳಲಿದೆ. ಶಬ್ದ ಕೇಳಬೇಕೆಂಬ ಸಂಕಲ್ಪದಿಂದ ಉಂಟಾದ ಸ್ಪಂದನೆ ಶ್ರೋತ್ರೇಂದ್ರಿಯವಾಯಿತು. ಅದೇ ಶ್ರೋತ್ರೇಂದ್ರಿಯ ಮುಂದೆ ಸ್ಥೂಲಶರೀರದ ಕಿವಿಗಳಲ್ಲಿ ತನ್ನ ಸ್ಥಾನ ಪಡೆದುಕೊಳ್ಳಲಿದೆ. ಪರಿಮಳವನ್ನು ಗ್ರಹಿಸಬೇಕೆಂಬ ಸಂಕಲ್ಪದಿಂದ ಬಂದ ಸ್ಪಂದನೆ ಘ್ರಾಣೇಂದ್ರಿಯವಾಯಿತು. ಮುಂಬರಲಿರುವ ಸ್ಥೂಲಶರೀರದಲ್ಲಿ ಮೂಗು ಇದರ ಸ್ಥಾನ. ರುಚಿ ನೋಡಬೇಕೆಂಬ ಸಂಕಲ್ಪದಿಂದ ಬಂದ ಸ್ಪಂದನೆ ರಸನೇಂದ್ರಿಯವಾಯಿತು. ಮುಂಬರಲಿರುವ ಸ್ಥೂಲಶರೀರದಲ್ಲಿ ನಾಲಿಗೆ ಇದರ ಸ್ಥಾನ.’ ಹೀಗೆ ಆ ಜೀವಾಕಾಶನು ಸೂಕ್ಷ್ಮಶರೀರದಲ್ಲಿ ಜ್ಞಾನೇಂದ್ರಿಯಗಳನ್ನು ಪಡೆದನು.