ಬೆಂಗಳೂರು: ಸೂಕ್ಷ್ಮ ನೀರಾವರಿಗೆ ಸಹಾಯಧನದಡಿ ಪರಿಕರಗಳನ್ನು ಪಡೆಯಲಿದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿ, ಎಲ್ಲ ವರ್ಗದ ರೈತರಿಗೆ ಸಬ್ಸಿಡಿ ನವೀಕರಣ ಸೌಲಭ್ಯ ವಿಸ್ತರಿಸಿ ಆದೇಶಿಸಿದೆ.
ಪರಿಶಿಷ್ಟ ಜಾತಿ, ಪಂಗಡಗಳ ರೈತ ಲಾನುಭವಿಗಳು ಏಳು ವರ್ಷಗಳ ನಂತರ ಅದೇ ಜಮೀನಿಗೆ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇತರ ವರ್ಗಗಳ ರೈತರಿಗೂ ಸರ್ಕಾರ ವಿಸ್ತರಿಸಿದೆ.
ಈ ಹಿಂದೆ ಪರಿಶಿಷ್ಟ ಜಾತಿ, ಪಂಗಡಗಳ ರೈತ ಲಾನುಭವಿಗಳು ಹೊರತುಪಡಿಸಿ ಇತರೆ ವರ್ಗದ ರೈತರಿಗೆ ಒಮ್ಮೆ ಮಾತ್ರ ಒಂದು ನಿರ್ದಿಷ್ಟ ಜಮೀನಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಘಟಕಗಳನ್ನು ಅವಕಾಶ ಕಲ್ಪಿಸಲಾಗಿತ್ತು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲ ಜಿಲ್ಲೆಗಳ ರೈತರು ಇತರೆ ರೈತರಿಗೆ ವಿಧಿಸಿರುವ ನಿರ್ಬಂಧ ಸಡಿಲಿಸಲು ವಿನಂತಿಸಿದ್ದರು. ಈ ಮನವಿಯನ್ನು ಎನ್.ಚಲುವರಾಯಸ್ವಾಮಿ ಗಂಭೀರವಾಗಿ ಪರಿಗಣಿಸಿದರು.
ನಿರಂತರ ಪ್ರಯತ್ನ ಕೊನೆಗೂ ಫಲಪ್ರದವಾಗಿದೆ. ಇತರೆ ವರ್ಗಗಳ ರೈತರ ಮೇಲಿನ ನಿರ್ಬಂಧ ಸಡಿಲಿಸಿ, ಏಳು ವರ್ಷಗಳ ನಂತರ ಮತ್ತದೇ ಜಮೀನಿಗೆ ಸಬ್ಸಿಡಿ ನವೀಕರಣದ ಅವಕಾಶದ ಆದೇಶ ಹೊರಬಿದ್ದಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ಯೋಜನೆಯಡಿ ಒಂಭತ್ತು ಘಟಕಗಳನ್ನು ಸೇರ್ಪಡೆಗೊಳಿಸಿ ಪ್ರಧಾನಮಂತ್ರಿ ರಾಷ್ಟ್ರೀಯ ವಿಕಾಸ ಯೋಜನೆ (ಪಿಎಂ-ಆರ್‌ಕೆವಿವೈ) ಎಂದು ಮರು ನಾಮಕರಣ ಮಾಡಿದೆ. ಇದರ ವ್ಯಾಪ್ತಿಗೆ ಒಳಪಡಿಸುವಂತೆ ರೈತರಿಗೆ ಸೌಲಭ್ಯ ಪಡೆಯಲು ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಪಿಎಂಕೆಎಸ್‌ಐ ಮತ್ತು ಪಿಎಂಎಂಎಸ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಯೋಜನೆಗೆ 274 ಕೋಟಿ ರೂ. ಮೀಸಲಿರಿಸಲಾಗಿತ್ತು. ಇದರಿಂದ 2.60 ಲಕ್ಷ ರೈತರಿಗೆ ಅನುಕೂಲ ತಲುಪಲಿದೆ. ಅಲ್ಲದೆ ಟಾಪ್‌ಅಪ್ ಯೋಜನೆಯಡಿ ಸೂಕ್ಷ್ಮ ನೀರಾವರಿ ಪರಿಕರಗಳಿಗೆ ಆರ್ಥಿಕ ನೆರವು ಒದಗಿಸಲು 252 ಕೋಟಿ ರೂ. ಅನುದಾನವನ್ನು ನೀಡಲಾಗಿದೆ.