ನ್ಯೂಸ್

ಮೈಕ್ರೋ ಫೈನಾನ್ಸ್ ದಂಧೆ; ಕಾನೂನು ರೀತ್ಯ ಕ್ರಮ: CM ಸಿದ್ದರಾಮಯ್ಯ

ಬೆಂಗಳೂರು: ಮೈಕ್ರೋ ಫೈನಾನ್ಸ್ ದಂಧೆ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ(CM) ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು. ಮೈಸೂರು-ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಹೆಚ್ಚಿದ್ದು, ಜನರಿಗೆ ಕಿರುಕುಳ ನೀಡುತ್ತಿರುವ ಯಾವುದೇ ಮೈಕ್ರೋ ಫೈನಾನ್ಸ್ ದಂಧೆ ವಿರುದ್ಧ  ಕ್ರಮವಹಿಸಲಾಗುವುದು ಎಂದರು.( 'ಮನೆಹಾಳು ಮೈಕ್ರೋ ಫೈನಾನ್ಸ್' ಶೀರ್ಷಿಕೆಯಡಿ 'ವಿಜಯವಾಣಿ' ಭಾನುವಾರ ಪ್ರಕಟಿಸಿದ್ದ ವರದಿಯನ್ನುಇಲ್ಲಿ ಸ್ಮರಿಸಬಹುದು)

ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ

ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತವಾಗಿದೆ. ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇಡಿಯವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಎಂದು ಸಿಎಂ ಆರೋಪಿಸಿದರು.

ಹಣ ದುರುಪಯೋಗದ ಪ್ರಶ್ನೆ ಇಲ್ಲ

ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಪ್ರತಿಪಕ್ಷಗಳ ಆರೋಪ ಹಾಗೂ ರಾಜ್ಯದ ತೆರಿಗೆ ಹಣದಲ್ಲಿ ನಾಳಿನ ಸಮಾರಂಭ ನಡೆಸುತ್ತಿರುವ ಬಗ್ಗೆ ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಣ ದುರುಪಯೋಗ ಆಗಿರುವ ಪ್ರಶ್ನೆಯೇ ಇಲ್ಲ ಎಂದರು.