ನ್ಯೂಸ್

ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಲು ಎಚ್ಡಿಕೆ ಆಗ್ರಹ

Bengaluru - Political - Shivananda Tagadur

ಬೆಂಗಳೂರು:

ಬಡ, ಮಧ್ಯಮ ವರ್ಗದ ಜನರ ರಕ್ತ ಹಿಂಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ಹಾವಳಿಯನ್ನು ನಿರ್ದಯವಾಗಿ ಹತ್ತಿಕ್ಕಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಇದನ್ನು ಅಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ಮಾಡಲು ಸಾಧ್ಯವಿಲ್ಲ. ಸರ್ಕಾರವೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಇಂಥ ಕಿಡಿಗೇಡಿ ಫೈನಾನ್ಸ್‌ಗಳಿಂದ ಜನರನ್ನು ರಕ್ಷಣೆ ಮಾಡಬೇಕು ಎಂದು ಋಣಮುಕ್ತ ಕಾಯ್ದೆ ಜಾರಿಗೆ ತಂದೆ. ನನ್ನ ಸರ್ಕಾರ ಹೋದ ಬಳಿಕ ಆ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿದರು ಎಂದರು.

ಜನರು ಪಡೆದ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಸೃಷ್ಟಿಯಾದರೆ ಅದಕ್ಕೆ ಪರಿಹಾರೋಪಾಯ ಏನು? ಎಂಬ ಬಗ್ಗೆ ನಾನು ಆಗ ಆಲೋಚನೆ ಮಾಡಿದ್ದೆ. ಆ ಸಂದರ್ಭದಲ್ಲಿ ಕೇರಳ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಒಂದು ಆಯೋಗವನ್ನು ರಚನೆ ಮಾಡಿತ್ತು. ಕೇರಳಕ್ಕೆ ತೆರಳಿ ಖುದ್ದು ಆ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ನಿಯೋಗವನ್ನು ಕೇರಳಕ್ಕೆ ಕಳಿಸಿದ್ದೆ. ಅದನ್ನು ಆಧಾರವಾಗಿ ಇಟ್ಟುಕೊಂಡು ನಾನು ಇಲ್ಲಿ ಋಣಮುಕ್ತ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು ಎಂದರು.

ನಂತರ ಬಂದ ಸರ್ಕಾರಗಳು ಈ ಕಾಯ್ದೆಯ ಮಹತ್ವವನ್ನೇ ಅರಿತುಕೊಳ್ಳಲಿಲ್ಲ. ಅದರ ಪರಿಣಾಮವೇ ಮೈಕ್ರೋ ಫೈನಾನ್ಸ್‌ಗಳ ಉಪಟಳ ಜಾಸ್ತಿ ಆಗಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಯಾವುದೇ ಪರವಾನಗಿ ಅಥವಾ ಅನುಮತಿಯನ್ನೇ ಪಡೆಯದೇ ಕಾನೂನುಬಾಹಿರವಾಗಿ ಈ ರೀತಿ ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಾಳಲಾರದೆ ಜನರು ಆತ್ಮಹತ್ಯೆ ಮಾಡಿಕೊಳ್ಳುವ, ಊರನ್ನೇ ಖಾಲಿ ಮಾಡಿ ಹೋಗುವ ದುಸ್ಥಿತಿ ಸೃಷ್ಟಿಯಾಗಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಜನರು ಹಳ್ಳಿಗಳನ್ನು ಬಿಟ್ಟಿದ್ದರು. ಮನೆಗಳಿಗೆ ಬೀಗ ಹಾಕಿ ಸಾಲಗಾರರಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಭೀತಿಗೆ ಸಿಲುಕಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಹೇಳುತ್ತಾರೆ. ನಿಮ್ಮನ್ನು ಮುಖ್ಯಮಂತ್ರಿ ಜಾಗದಲ್ಲಿ ಕೂರಿಸಿರುವ ಆ ಜನ ಏನಾಗಿದ್ದಾರೆ? ಅವರನ್ನು ಗಟ್ಟಿ ಮಾಡಲಿಕ್ಕೆ ಏನು ಮಾಡಿದ್ದೀರಿ? ಎಂಬುದು ನನ್ನ ಪ್ರಶ್ನೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಕುಸಿದ ಕಾನೂನು ಸುವ್ಯವಸ್ಥೆ:

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಾಡಹಗಲೇ ಬ್ಯಾಂಕ್‌ಗಳಿಗೆ ನುಗ್ಗಿ ಲೂಟಿ ಮಾಡಲಾಗುತ್ತಿದೆ. ಎಟಿಎಂ ಗಳಿಗೆ ಹಣ ತುಂಬುವ ಸಿಬ್ಬಂದಿಯನ್ನು ಗುಂಡಿಟ್ಟು ಕೊಂದು ಹಗಲಲ್ಲೇ ಹಣ ದೋಚಿ ನೆರೆ ರಾಜ್ಯಕ್ಕೆ ಪರಾರಿ ಆಗುವುದು. ಹೀಗೆ ಅಪರಾಧ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನನಗೇನು ಸಂಬಂಧ ಇಲ್ಲವೆಂದು ಗೃಹ ಸಚಿವರು ಹೇಳಿದರೆ ಅರ್ಥವೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಬಾಹಿರವಾಗಿ ಮೈಕ್ರೋ ಫೈನಾನ್ಸ್ ಮಾಡಲಿಕ್ಕೆ ಖಾಸಗಿ ಕಂಪನಿಗಳಿಗೆ ಅನುಮತಿ ಕೊಟ್ಟವರು ಯಾರು? ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯ ನೀಡಿದರೆ ಮೈಕ್ರೋ ಫೈನಾನ್ಸ್‌ಗಳ ಬಳಿಗೆ ಸಾಲಕ್ಕೆ ಏತಕ್ಕೆ ಹೋಗುತ್ತಾರೆ? ಎಂದು ಎಚ್ಡಿಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.