ಮೈಕಲ್​ ಚಿತ್ರದ ಪೋಸ್ಟರ್ 
ನ್ಯೂಸ್

4090 ಕೋಟಿ ರೂ. ಗಳಿಕೆ ಮಾಡಿ ಕಿಂಗ್ ಆಫ್ ಕಲೆಕ್ಷನ್ ಆದ ಮೈಕಲ್

ಪ್ರಮುಖ ಮುಖ್ಯಾಂಶಗಳು

  • ಡಾನ್ಸ್​, ಗಾಯನದಿಂದ ಇಡೀ ಜಗತ್ತನೇ ತನ್ನತ್ತ ಸೆಳೆದುಕೊಂಡ ಮೈಕಲ್​ ಜಾಕ್ಸನ್
  • ರಿಲೀಸ್ ಆದ 10 ದಿನಕ್ಕೆ ವಿಶ್ವಾದ್ಯಂತ 4000 ಕೋಟಿ ರೂ., ಭಾರತದಲ್ಲಿ 44 ಕೋಟಿ ರೂ. ಗಳಿಕೆ
  • ಮೈಕಲ್ ಜಾಕ್ಸನ್ ಪಾತ್ರದಲ್ಲಿ ಜಾಫರ್ ಜಾಕ್ಸನ್ ಮಿಂಚು
ಡಾನ್ಸ್ ಮತ್ತು ಗಾಯನ ಮೂಲಕ ಇಡೀ ಜಗತ್ತನ್ನು ತನ್ನಡೆಗೆ ಸೂಜಿಗಲ್ಲಿನಂತೆ ಸೆಳೆದ ಪ್ರತಿಭೆ ಮೈಕಲ್ ಜಾಕ್ಸನ್. ‘ಕಿಂಗ್ ಆ್ ಪಾಪ್’ ಎಂದೇ ಪ್ರಸಿದ್ಧರಾಗಿದ್ದ ಅವರು 20ನೇ ಶತಮಾನದ ಸಾಂಸ್ಕೃತಿಕ ಮೇರು ಪ್ರತಿಭೆಗಳಲ್ಲಿ ಓರ್ವರಾಗಿದ್ದಾರೆ. ಅಂತಹ ಮೈಕಲ್ ಜಾಕ್ಸನ್ ಜೀವನ ಹಾದಿಯೇ ಕಲ್ಲು ಮುಳ್ಳಿನ ಮೇಲಿನ ನಡಿಗೆ. ಆಫ್ರಿಕಾ ಮೂಲದ ಅಮೆರಿಕನ್ ಕುಟುಂಬದಲ್ಲಿ ಜನಿಸಿದ್ದ ಅವರು ಬದುಕಿನಲ್ಲಿ ಸಾಕಷ್ಟು ಏರಿಳಿತ ಕಂಡು, ನೋವುಂಡು ಸಾಧನೆಯ ಶಿಖರ ಏರಿದ್ದರು. ಪ್ರತಿಭೆಯ ಮೂಲಕವೇ ಇಡೀ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಇದೀಗ ಮೈಕಲ್ ಜಾಕ್ಸನ್ ನಿಧನರಾಗಿ 17 ವರ್ಷಗಳು ಕಳೆದಿವೆ. ಆದರೆ, ಅಭಿಮಾನಿಗಳ ಜನಮಾನಸದಿಂದ ಇಂದಿಗೂ ಅವರು ಮರೆಯಾಗಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಬಿಡುಗಡೆಯಾಗಿರುವ ‘ಮೈಕಲ್’ ಚಿತ್ರ. ಹೌದು, ಹೆಸರೇ ಹೇಳುವಂತೆ ‘ಕಿಂಗ್ ಆಫ್​ ಪಾಪ್’ ಮೈಕಲ್ ಜಾಕ್ಸನ್ ಜೀವನಾಧಾರಿತ ಚಿತ್ರವಿದು. ಆ್ಯಂಟೋಯಿನೆ ಫುಕ್ವಾ ನಿರ್ದೇಶನದ ಈ ಚಿತ್ರದಲ್ಲಿ ಮೈಕಲ್ ಜಾಕ್ಸನ್ ಆಗಿ ಅವರ ಅಣ್ಣ ಜರ್ಮೈನ್ ಜಾಕ್ಸನ್ ಪುತ್ರ ಜಾರ್ ಜಾಕ್ಸನ್ ಗಮನ ಸೆಳೆದಿದ್ದಾರೆ. ಕಳೆದ ಏ.24ರಂದು ವಿಶ್ವಾದ್ಯಂತ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಿಂಚಿನ ಓಟ ಮುಂದುವರಿಸಿದೆ. ಇನ್ನು ಭಾರತದಲ್ಲೂ ಬಾಲಿವುಡ್‌ನ ‘ಧುರಂಧರ್ 2’, ‘ರಾಜಾ ಶಿವಾಜಿ’, ‘ಭೂತ್ ಬಂಗ್ಲಾ’, ಕನ್ನಡದ ‘ಕೆಡಿ: ದ ಡೆವಿಲ್’ ಚಿತ್ರಗಳ ಮಧ್ಯೆ ‘ಮೈಕಲ್’ ಪ್ರೇಕ್ಷಕರ ಗಮನ ಸೆಳೆದಿದೆ. ರಿಲೀಸ್ ಆದ 10 ದಿನಗಳಲ್ಲಿ ಈ ಚಿತ್ರ ವಿಶ್ವಾದ್ಯಂತ 4090 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿ 44 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಇನ್ನು ಈ ಚಿತ್ರವು ಹಲವಾರು ದಾಖಲೆಗಳನ್ನು ಬರೆದಿದ್ದು, 2018ರ ‘ಬೊಹಿಮಯನ್ ರಾಪ್ಸೊಡಿ’ ಬಳಿಕ ವಿಶ್ವ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಎರಡನೇ ಮ್ಯೂಸಿಕಲ್ ಬಯೋಪಿಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. -ಏಜೆನ್ಸೀಸ್