ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ದಿನದಿಂದ ದಿನಕ್ಕೆ ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ರಾಷ್ಟ್ರ ಮಟ್ಟದ ಗಣ್ಯರಷ್ಟೇ ಅಲ್ಲದೆ ಅಂತರರಾಷ್ಟ್ರ ಮಟ್ಟದ ಕೆಲ ಗಣ್ಯರು ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ನೀಲಿ ತಾರೆ ಮಿಯಾ ಖಲೀಫಾ ಕೂಡ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಮಿಯಾ ಖಲೀಫಾ ಟ್ವಿಟ್ಟರ್ನಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಹೋರಾಟಗಾರ್ತಿಯೊಬ್ಬರು, ರೈತರನ್ನು ಕೊಲ್ಲುವುದನ್ನು ನಿಲ್ಲಿಸಿ ಎನ್ನುವ ಪ್ಲೇಕಾರ್ಡ್ ಹಿಡಿದಿರುವ ಫೋಟೋ ಶೇರ್ ಮಾಡಿರುವ ಆಕೆ, ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಾನು ರೈತರ ಪರ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಟ್ವೀಟ್ಗೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. "ಇವರು ಪೇಯ್ಡ್ ಆ್ಯಕ್ಟರ್ಗಳಾ? ಹಾಗಾದರೆ ನಿರ್ದೇಶಕರುಗಳು ಇವರ ಮೇಲೆ ಕಣ್ಣಿಟ್ಟಿರಬೇಕು. ಪ್ರಶಸ್ತಿ ಪ್ರಧಾನ ಸಮಯದಲ್ಲಿ ಇವರನ್ನು ಮರೆಯಬಾರದು. ನಾನು ರೈತರ ಪರವಾಗಿ ನಿಲ್ಲುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಮಿಯಾಳ ಈ ಬೆಂಬಲಕ್ಕೆ ಟ್ರೋಲಿಗರು ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ತುಂಬೆಲ್ಲ ಮಿಯಾ ಫೋಟೋ ಹರಿದಾಡಲಾರಂಭಿಸಿದೆ. ಮಿಯಾ ಗದ್ದೆಯಲ್ಲಿ ರೈತ ಮಹಿಳೆಯಾಗಿರುವಂತಹ ಫೋಟೋಗಳನ್ನೆಲ್ಲ ಎಡಿಟ್ ಮಾಡಿ ಹರಿಬಿಡಲಾಗುತ್ತಿದೆ.
ಕೇವಲ ಮಿಯಾ ಖಲೀಫಾ ಮಾತ್ರವಲ್ಲ ಇನ್ನು ಕೆಲ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಪಾಪ್ ಗಾಯಕ ರಿಹಾನ್ನಾ ಮತ್ತು ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಕೂಡ ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ ಮತ್ತು ನಡೆಯುತ್ತಿರುವ ಆಂದೋಲನಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. (ಏಜೆನ್ಸೀಸ್)