ಬೆಂಗಳೂರು ದಕ್ಷಿಣವನ್ನು ಐಟಿ- ಬಿಟಿ, ಕೈಗಾರಿಕಾ ಕಾರಿಡಾರ್ನೊಂದಿಗೆ ಸಂರ್ಪಸುವ ‘ನಮ್ಮ ಮೆಟ್ರೋ’ದ ಬಹುನಿರೀಕ್ಷಿತ ಹಳದಿ ಮಾರ್ಗವು ಮೇ ಅಂತ್ಯದೊಳಗೆ ಕಾರ್ಯಾಚರಣೆಗೊಳ್ಳುವ ನಿರೀಕ್ಷೆ ಇದೆ. ಹಳದಿ ಮಾರ್ಗ ಸೇರ್ಪಡೆಯಿಂದ ಹಲವು ಪ್ರದೇಶಗಳಲ್ಲಿ ಸಂಚಾರ ಸಿಕ್ಕು ಕಡಿಮೆಯಾಗುವುದಲ್ಲದೆ, ಸಾರ್ವಜನಿಕ ಸಾರಿಗೆ ವಲಯಕ್ಕೆ ಪ್ರಮುಖ ಉತ್ತೇಜನ ಸಿಗಲಿದೆ. ಹಳದಿ ಮಾರ್ಗವು ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ (ಆರ್ವಿ) ರಸ್ತೆ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರವರೆಗೆ ಸಂಪರ್ಕ ಸಾಧಿಸಲಿದೆ. ಈ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಿಸಲಿದ್ದು, 18.8 ಕಿಮೀ ಉದ್ದದ ಮಾರ್ಗ ಹೊಂದಿರಲಿದೆ.
ಬೊಮ್ಮಸಂದ್ರ, ಹೆಬ್ಬಗೋಡಿ, ಕೋನೇನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಬೆರಟೇನ ಅಗ್ರ ಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯ ದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣವರೆಗೆ ಕಾರ್ಯಾಚರಿಸಲಿದೆ. ಜಯನಗರದ ಆರ್ವಿ ರೋಡ್ನಿಂದ, ಬೊಮ್ಮಸಂದ್ರವರೆಗೆ 3 ಇಂಟರ್ಚೇಂಜ್ (ಸಿಲ್ಕ್ಬೋರ್ಡ್, ಆರ್ವಿ ರೋಡ್, ಜಯದೇವ ಆಸ್ಪತ್ರೆ) ನಿಲ್ದಾಣಗಳೊಂದಿಗೆ ಒಟ್ಟು 16 ನಿಲ್ದಾಣಗಳನ್ನು ಒಳ ಗೊಂಡಿದೆ. ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರತಿನಿತ್ಯ ಸುಮಾರು 2.6 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆಗಳಿವೆ.
ಚಾಲಕರಹಿತ ಮೆಟ್ರೋ ರೈಲುಗಳ ತಪಾಸಣೆ ಯನ್ನು ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಂಡ ಇತ್ತೀಚೆಗೆ ನಡೆಸಿತ್ತು. ಈ ತಪಾಸಣೆಯು ಹೊಸ ರೋಲಿಂಗ್ ಸ್ಟಾಕ್, ರೈಲಿಗೆ ರೈಲ್ವೆ ಸಚಿವಾಲಯದ ಅನುಮೋದನೆ ಪಡೆಯುವ ಮೊದಲ ಹೆಜ್ಜೆಯಾಗಿತ್ತು. ಅನುಮೋದನೆ ಬಳಿಕ ಈ ಮಾರ್ಗದ ಸಂಕೇತ ವ್ಯವಸ್ಥೆಯ ಪರೀಕ್ಷೆಗಳು ಪೂರ್ಣಗೊಳ್ಳಬೇಕಿದೆ. ಹಳದಿ ಮಾರ್ಗದ ಸಂಪೂರ್ಣ ತಪಾಸಣೆಗೆ ತಂಡವನ್ನು ಮತ್ತೆ ಬಿಎಂಆರ್ಸಿಎಲ್ ಆಹ್ವಾನಿಸಲಿದೆ.
ಹಳದಿ ಮಾರ್ಗ ಸುತ್ತಮುತ್ತ ಸಾಕಷ್ಟು ವಾಣಿಜ್ಯ ಮತ್ತು ವಸತಿ ಪ್ರದೇಶಗಳಿರು ವುದರಿಂದ ಈ ಭಾಗದ ಹೆಚ್ಚಿದ ಸಂಚಾರ ಸಿಕ್ಕಿಗೆ ಮೆಟ್ರೋ ದೊಡ್ಡ ಪರಿಹಾರವಾಗಲಿದೆ. ಮೂರು ನಿಲ್ದಾಣಗಳಿಗೆ ಮೂರು ಖಾಸಗಿ ಕಂಪನಿಗಳ ಹೆಸರಿಡಲು ಮೆಟ್ರೋ ಮುಂದಾಗಿದೆ. ಕೋನೇನ ಅಗ್ರಹಾರ ನಿಲ್ದಾಣಕ್ಕೆ ಇನ್ಪೋಸಿಸ್, ಹೆಬ್ಬಗೋಡಿಗೆ ಬಯೋಕಾನ್, ಬೊಮ್ಮ ಸಂದ್ರಕ್ಕೆ ಡೆಲ್ಟಾ ಕಂಪನಿಗಳ ಹೆಸರು ಸೇರಲಿವೆ. ಇದಕ್ಕಾಗಿ ಬಿಎಂಆರ್ಸಿಎಲ್ ಜತೆ ಕಂಪನಿಗಳು 75ರಿಂದ 115 ಕೋಟಿ ರೂ. ಮೊತ್ತಕ್ಕೆ 30 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿವೆ.
ಸಂಪೂರ್ಣ ಕಾರಿಡಾರ್ ನಿಮಾಣ ಹಂತದಲ್ಲಿದ್ದು, ಗಡುವಿಗಿಂತ ಮೊದಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಳದಿ ಮಾರ್ಗದಲ್ಲಿ ಪ್ರತಿದಿನ ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ರೈಲುಗಳು ಸಂಚರಿಸಲಿದ್ದು, ಪ್ರಯಾಣ ದರವೂ ಕೈಗೆಟುಕುವಂತಿದೆ. ಕನಿಷ್ಠ ಪ್ರಯಾಣ ದರ 10 ರೂ. ಆಗಿದ್ದರೆ, ಗರಿಷ್ಠ 60 ರೂ. ಆಗಿರುತ್ತದೆ.