E Sreedharan 
ನ್ಯೂಸ್

‘ಮೆಟ್ರೊ ಮ್ಯಾನ್’ ಇ ಶ್ರೀಧರನ್ ಇದೀಗ ಕೇರಳ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ

ತಿರುವನಂತಪುರಂ: ‘ಮೆಟ್ರೊ ಮ್ಯಾನ್’ ಎಂದು ಖ್ಯಾತಿಯಾಗಿರುವ ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಅವರರನ್ನು ಕೇರಳ ಬಿಜೆಪಿ, ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅವರು ಕಳೆದ ಗುರುವಾರ ಸಂಜೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.

ಕೇರಳದ ಮಲ್ಲಪುರಂನಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಯಾತ್ರೆಯಲ್ಲಿ ಕೇಂದ್ರ ಸಚಿವ ಆರ್ ಕೆ ಸಿಂಗ್ ಅವರ ನೇತೃತ್ವದಲ್ಲಿ ಇ ಶ್ರೀಧರನ್ ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಏಪ್ರೀಲ್​ನಲ್ಲಿ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಶ್ರೀಧರನ್ ಸ್ಪರ್ಧಿಸಲಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಅವರು, ಶ್ರೀಧರನ್ ಒಬ್ಬ ರಾಜಕೀಯ ವ್ಯಕ್ತಿಯಾಗಿ ರಾಜ್ಯವನ್ನು ಮುನ್ನಡೆಸುವುದಿಲ್ಲ. ಅವರೊಬ್ಬ ಶ್ರೇಷ್ಠ ತಾಂತ್ರಿಕ ಮನುಷ್ಯನಾಗಿ ರಾಜ್ಯವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಕೇರಳ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂಬ ತಯಾರಿಯಲ್ಲಿ ಬಿಜೆಪಿ ಇದೆ. ಹೀಗಾಗಿ ಬಿಜೆಪಿ ಹಲವರಿಗೆ ಗಾಳ ಹಾಕಿದೆ. ಶ್ರೀಧರನ್ ಅವರು, ತಾವು ಕೇರಳ ಮುಖ್ಯಮಂತ್ರಿಯಾಗಲು ಅರ್ಹ ಅಭ್ಯರ್ಥಿ ಎಂದು ಈಗಾಗಲೇ ಹೇಳಿಕೊಂಡಿದ್ದರು.

88ರ ವಯೋಮಾನದ ಶ್ರೀಧರನ್ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಭಾರತದ ದೆಹಲಿ ಮೆಟ್ರೋ ಸೇರಿದಂತೆ ಇತರ ನಗರಗಳ ಮೆಟ್ರೋ ಯೋಜನೆ ಹಾಗೂ ಮಹತ್ವದ ರೈಲು ಯೋಜನೆಗಳಲ್ಲಿ ಶ್ರೀಧರನ್ ಪಾತ್ರ ತುಂಬಾ ದೊಡ್ಡದಿದೆ. ಅದ್ಭುತ ಎಂಜಿನಿಯರ್ ಆಗಿರುವ ಅವರನ್ನು ಮೆಟ್ರೊ ಮ್ಯಾನ್ ಎಂದೇ ಕರೆಯಲಾಗುತ್ತಿದೆ.