ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಮಹತ್ವದ ಪಾತ್ರ ವಹಿಸಿದ್ದು, ಪ್ರಯಾಣಿಕರ ಜೀವನಾಡಿಯಾಗಿ ಬದಲಾಗಿದೆ. ಭಾರತದ ಮೆಟ್ರೋ ಜಾಲವು 1000 ಕಿಲೋಮೀಟರ್ಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿರುವುದು ಪ್ರಶಂಸನೀಯ. ಪ್ರಯಾಣವನ್ನು ಸರಾಗ, ಸುಗಮ ಹಾಗೂ ಪ್ರಯಾಣಿಕಸ್ನೇಹಿಗೊಳಿಸಿರುವುದು ಮೆಟ್ರೋದ ಹೆಗ್ಗಳಿಕೆ.
ಸಮಯ ಹಾಗೂ ಶ್ರಮದ ಉಳಿತಾಯವೂ ಆಗುತ್ತಿದೆ. ಅಲ್ಲದೆ, ರಸ್ತೆಯಲ್ಲಿನ ಸಂಚಾರ ದಟ್ಟಣೆ ತಗ್ಗಿಸಲು ಕೂಡ ಪೂರಕ. ಬೆಂಗಳೂರಿನಲ್ಲೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಮನಾರ್ಹ. ಈ ವರ್ಷ ಹಳದಿ ಮಾರ್ಗವೂ ಲೋಕಾರ್ಪಣೆಯಾಗಲಿರುವುದರಿಂದ ಮತ್ತಷ್ಟು ಪ್ರದೇಶಗಳನ್ನು ಒಳಗೊಳ್ಳಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಸಮೂಹ ಸಾರಿಗೆ ವ್ಯವಸ್ಥೆ ಶಕ್ತಿಶಾಲಿಯಾದಷ್ಟು ಅದರಿಂದ ಹಲವು ಅನುಕೂಲಗಳಿವೆ. ಅಭಿವೃದ್ಧಿಯ ಬಹುಮುಖಿ ಆಯಾಮಗಳಲ್ಲಿ ಸಮೂಹ ಸಾರಿಗೆಯ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಮೆಟ್ರೋದ ಕೊಡುಗೆ ಮಹತ್ವದ್ದು. 2014ಕ್ಕೆ ಮೊದಲು ಭಾರತದ ಮೆಟ್ರೋ ಜಾಲ ಕೇವಲ 248 ಕಿಲೋಮೀಟರ್ ಆಗಿತ್ತು ಮತ್ತು ಐದು ನಗರಗಳಿಗೆ ಸೀಮಿತವಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ, ಭಾರತದಲ್ಲಿ 752 ಕಿಲೋಮೀಟರ್ ಹೊಸ ಮೆಟ್ರೋ ಮಾರ್ಗಗಳನ್ನು ಉದ್ಘಾಟಿಸ ಲಾಗಿರುವುದು ಅಭಿವೃದ್ಧಿಗೆ ಸಿಕ್ಕಿರುವ ವೇಗವೆಂದೇ ವ್ಯಾಖ್ಯಾನಿಸಬಹುದು.
2014ರಲ್ಲಿ ದೇಶದ ಮೂಲಸೌಕರ್ಯ ರಂಗದ ಬಜೆಟ್ 2 ಲಕ್ಷ ಕೋಟಿ ರೂ.ಗಳಷ್ಟಿತ್ತು. ಈಗ ಅದು (2024-25) 11 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಪ್ರಸ್ತುತ ದೇಶಾದ್ಯಂತ 21 ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚರಿಸುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಮೆಟ್ರೋ ಜಾಲ ಇನ್ನಷ್ಟು ನಗರಗಳಿಗೆ ವಿಸ್ತರಣೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ ನಡುವಿನ ನಮೋ ಭಾರತ್ ಕಾರಿಡಾರ್ನ್ನು ಉದ್ಘಾಟಿಸಿ, ಈ ರೈಲಿನಲ್ಲಿ ಪ್ರಯಾಣಿಸಿದರು (ಇದು ದೆಹಲಿಯ ಮೊದಲ ನಮೋ ಭಾರತ್ ರೈಲು) ಹಾಗೂ ಯುವಕರೊಂದಿಗೆ ಸಂವಾದ ನಡೆಸಿದರು. ‘ಹತ್ತು ವರ್ಷಗಳ ಹಿಂದೆ ಮೆಟ್ರೋ ಸಂಪರ್ಕದ ವಿಷಯದಲ್ಲಿ ಭಾರತವು ಜಾಗತಿಕವಾಗಿ ಅಗ್ರ ಹತ್ತರಲ್ಲಿ ಇರಲಿಲ್ಲ. ಆದಾಗ್ಯೂ, ಕಳೆದ ಹತ್ತು ವರ್ಷಗಳಲ್ಲಿ, ಮೆಟ್ರೋ ಜಾಲದ ವಿಷಯದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ’ ಎಂದ ಪ್ರಧಾನಿ ಮೋದಿಯವರು, ‘ಪ್ರಸ್ತುತ ಅಧಿಕಾರಾವಧಿಯಲ್ಲಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತವು ಮೆಟ್ರೋ ಸೇರಿದಂತೆ ಹೈಸ್ಪೀಡ್ ರೈಲುಗಳ ಯೋಜನೆಗಳ ಬಗ್ಗೆ ಪ್ರಸ್ತಾವನೆ ಮುಂದಿಟ್ಟಾಗ, ಕೆಲ ದೇಶಗಳು ಕುಹಕವಾಡಿದ್ದವು. ಆದರೆ, ಅದ್ಭುತ ಇಂಜಿನಿಯರಿಂಗ್ ಕೌಶಲ, ನುರಿತ ಮಾನವ ಸಂಪನ್ಮೂಲ ಹಾಗೂ ಉನ್ನತ ತಂತ್ರಜ್ಞಾನ ಹೊಂದಿರುವ ಭಾರತವು ಅತ್ಯಲ್ಪ ಅವಧಿಯಲ್ಲೇ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಹೊಸಕ್ರಾಂತಿ ಮಾಡಿರುವುದು ಪ್ರಶಂಸನೀಯ. ಖಂಡಿತವಾಗಿಯೂ, ಇದರ ಲಾಭ ಇನ್ನಷ್ಟು ನಗರಗಳಿಗೆ ಸಿಗಬೇಕಿದ್ದು, ಹಾಲಿ ನಡೆಯುತ್ತಿರುವ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿ, ಹೊಸ ನಗರಗಳನ್ನು ಬೆಸೆಯಲಿ.