ನ್ಯೂಸ್

ಮೆಟ್ರೋ ಪ್ರಯಾಣ ದರ ನಿಗದಿ ಮಾಡೋದು ಕೇಂದ್ರದ ಸಮಿತಿ; CM ಸಿದ್ದರಾಮಯ್ಯ

ಮೆಟ್ರೋ ರೈಲಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ನೇಮಕ ಮಾಡಿರುವ ಸಮಿತಿ ಎಂದು CM ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮೆಟ್ರೋ ಟಿಕೆಟ್​ ದರ ಏರಿಕೆ ಬಗ್ಗೆ ಮಾತನಾಡಿದ ಸಿದ್ದು, ಮೆಟ್ರೋ ಸ್ವಾಯತ್ತ ಸಂಸ್ಥೆಯಾದರೂ, ಸಮಿತಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಇಬ್ಬರು ರಾಜ್ಯ ಸರ್ಕಾರದ ಪ್ರತಿನಿಧಿಗಳಿರುತ್ತಾರೆ. ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ನೀಡುತ್ತದೆ. ಬೆಲೆ ನಿಗದಿ ಮಾಡುವುದು ಸಮಿತಿ. ಅಧ್ಯಕ್ಷರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರ. ಪ್ರಸ್ತುತ ತಮಿಳುನಾಡು ರಾಜ್ಯದ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಅನ್ನಭಾಗ್ಯ ಯೋಜನೆಯ ಮೊತ್ತ ಐದು ತಿಂಗಳಿನಿಂದ ಹಾಗೂ ಗೃಹಲಕ್ಷ್ಮೀ ಯೋಜನೆಯ ಮೊತ್ತ ಮೂರು ತಿಂಗಳಿನಿಂದ ಜಮಾ ಆಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಯಾವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾವತಿ ಮಾಡೇ ಹೋಗಿದ್ದರೆ ಮಾಡುತ್ತೇವೆ . ಪಾವತಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಜಿಪಂ, ಪಪಂ ಎಲೆಕ್ಷನ್​ಗೆ  ಸಿದ್ಧ

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ನಾವು ಸಿದ್ಧರಾಗಿದ್ದು, ಉಚ್ಛ ನ್ಯಾಯಾಲಯದ ಸೂಚನೆ ಮೇರೆಗೆ ಚುನಾವಣೆ ಮಾಡಲಾಗುವುದು ಎಂದರು.

ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾ ಈ ಕುರಿತು ಪಕ್ಷದ ಹೈ ಕಮಾಂಡ್ ತೀರ್ಮಾನಿಸಲಿದ್ದಾರೆ ಎಂದರು.