ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆನೇಕಲ್ನಲ್ಲಿ ನೂತನವಾಗಿ ನಿರ್ಮಾಣವಾಗುವ ಕ್ರಿಕೆಟ್ ಕ್ರೀಡಾಂಗಣ ಸೇರಿ ಕ್ರೀಡಾ ಸಮುಚ್ಚಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಯೋಜನೆ ರೂಪಿಸುತ್ತಿದೆ.
ನಮ್ಮ ಮೆಟ್ರೋದ ಬಹುನಿರೀತ ಯೋಜನೆಯ ಭಾಗವಾದ ಗುಲಾಬಿ ಮಾರ್ಗ ಕಾಳೇನ ಅಗ್ರಹಾರ ಹಾಗೂ ಕಾಡುಗೋಡಿ ಸಂಪರ್ಕಿಸುತ್ತಿದ್ದು, (68 ಕಿ.ಮೀ) ಮಾರ್ಗ ಮಧ್ಯೆ ಜಿಗಲ್ಲೆಯಿಂದ ಕವಲೊಡೆಸಿ 3-4 ಕಿ.ಮೀ ವರೆಗೆ ಆನೇಕಲ್ ಕಡೆಗೆ ಕೊಂಡೊಯ್ಯಲು ಬಿಎಂಆರ್ಸಿಎಲ್ ಮುಂದಗಿದೆ. ಇದರಿಂದ ಬನ್ನೇರುಘಟ್ಟ ಮತ್ತು ಆನೇಕಲ್ ಕಡೆಯಿಂದ ಬರುವ ಜನರು ಆನೇಕಲ್ ಸೂರ್ಯಸಿಟಿಯಲ್ಲಿ ನಿಮಾರ್ಣವಾಗಲಿರುವ ಕ್ರೀಡಾ ಸಂಕೀರ್ಣಕ್ಕೆ ತಲುಪಲು ಅನುಕೂಲವಾಗಲಿದೆ. ಮುಖ್ಯ ಮಾರ್ಗವು ತನ್ನ ಹಾದಿಯಲ್ಲಿ ಮುಂದುವರಿಯಲಿದೆ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಸರ್ಕಲ್ ಹಾಗೂ ವರ್ತೂರು ಕೋಡಿ ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗದ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧಿನ, ಯೋಜನಾ ವೆಚ್ಚ, ಮಾರ್ಗದ ನಡುವಿನ ನಿಲ್ದಾಣಗಳು ಸೇರಿ ಇತರೆ ಅಂಶಗಳ ಕುರಿತ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ದೆಹಲಿ ಮೂಲದ ಇಟ್ರೋಸಾಫ್ಟ್ ಸಲ್ಯೂಶನ್ಸ್ ಪ್ರೈ.ಗೆ ಜವಾಬ್ದಾರಿ ವಹಿಸಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಗೃಹ ಮಂಡಳಿ, ಆನೇಕಲ್ ತಾಲೂಕಿನ ಸೂರ್ಯನಗರ 4 ನೇ ಹಂತದಲ್ಲಿ 75 ಎಕರೆ ಪ್ರದೇಶದಲ್ಲಿ ಸುಮಾರು 1650 ಕೋಟಿ ರೂ.ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಬಹುಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ತಿಳಿಸಿದರು.