ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ಅವಘಡಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಜಾಗೃತಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೇಟಿಕುಪ್ಪೆ ವನ್ಯಜೀವಿ ತಂಡ ಪ್ರಥಮ ಸ್ಥಾನ ಗಳಿಸಿತು.
ಉದ್ಯಾನವನದ ಅಂತರಸಂತೆ ವಲಯ ಕೇಂದ್ರದಲ್ಲಿ ಡಿ.16 ಮತ್ತು 17ರ ಎರಡು ದಿನಗಳ ಕಾಲ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಎನ್.ಬೆಳ್ತೂರು ತಂಡದ ವಿರುದ್ಧ 20 ರನ್‌ಗಳ ಭರ್ಜರಿ ಜಯ ಸಾಧಿಸಿದರು.
ಪಂದ್ಯಾವಳಿಯಲ್ಲಿ ಅಂತರಸಂತೆ ವಲಯ ವ್ಯಾಪ್ತಿಯ ಎನ್.ಬೆಳ್ತೂರು, ಹೊಸಹೊಳಲು ಮತ್ತು ಅಂತರಸಂತೆ ಗಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ಗ್ರಾಮಗಳು ಮತ್ತು ಹಾಡಿಯ 12 ತಂಡಗಳು ಭಾಗವಹಿಸಿದ್ದವು.
ಕ್ರಿಕೆಟ್ ಮೂಲಕ ಜಾಗೃತಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇದೀಗ ಬೇಸಿಗೆ ಆರಂಭಗೊಳ್ಳುತ್ತಿದ್ದು, ಅರಣ್ಯಕ್ಕೆ ಬೆಂಕಿ ಬೀಳುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಆದರೆ ಬೆಂಕಿ ಅವಘಡಗಳನ್ನು ತಡೆಯಲು ಕೇವಲ ಇಲಾಖೆ ಪಾತ್ರವೊಂದೇ ಸಾಕಾಗದು. ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಲಾಖೆ ಕಳೆದ ಎರಡು ವರ್ಷಗಳಿಂದ ಕಾಡಂಚಿನ ಗ್ರಾಮಗಳಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಯನ್ನು, ಆಟೋಟಗಳನ್ನು ಆಯೋಜಿಸಿ ಅಲ್ಲಿನ ಗ್ರಾಮಸ್ಥರಿಗೆ, ಹಾಡಿಯ ಜನರಿಗೆ ಕಾಡಿನ ಪ್ರಾಮುಖ್ಯತೆ, ಬೆಂಕಿ ಅವಘಡಗಳ ಕುರಿತು ಮತ್ತು ಅವುಗಳ ನಿಯಂತ್ರಣದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಇಲಾಖೆ ಜನರ ನಡುವೆ ನಿಂತು ಅವರ ಸಹಯೋಗದಲ್ಲಿ ಕೆಲಸ ಮಾಡಿದರೆ ಮಾತ್ರ ಅರಣ್ಯ ಸಂಪತ್ತನ್ನು ಉಳಿಸಬಹುದಾಗಿದೆ ಎನ್ನುವ ವಿಶ್ವಾಸದಲ್ಲಿದ್ದು, ಈ ಬಾರಿಯೂ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಳಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳೂ ಮುಂದಿನ ದಿನಗಳಲ್ಲಿ ಇಲಾಖೆ ಆಯೋಜಿಸುವ ಬೆಂಕಿ ತಡೆ ಅಭಿಯಾನದ ಸಂದೇಶವಾಹಕರಾಗಿ (ಮೆಸೆಂಜರ್ಸ್) ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಅಂತರಸಂತೆ ವಲಯ ಎಸಿಎಫ್ ರಂಗಸ್ವಾಮಿ, ಆರ್‌ಎಫ್‌ಒ ಭರತ್, ಎನ್.ಬೆಳ್ತೂರು ಗ್ರಾಪಂ ಅಧ್ಯಕ್ಷೆ ಆಶಾ ಚಲುವರಾಜು, ಹೊಸಹೊಳಲು ಗ್ರಾಪಂ ಅಧ್ಯಕ್ಷ ಸೋಮೇಶ್, ಅಂತರಸಂತೆ ಗ್ರಾಪಂ ಅಧ್ಯಕ್ಷೆ ರೇಖಾ ಗುರುಸ್ವಾಮಿ, ಡಿಆರ್‌ಎಫ್‌ಒ ಆಂಟನಿ ಸೇರಿದಂತೆ ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಮತ್ತು ಗಿರಿಜನರು ಹಾಜರಿದ್ದರು.
ಪಂದ್ಯಾವಳಿಯ ನಡು ನಡುವೆ ಅರಣ್ಯ ಬೆಂಕಿ ತಡೆ ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಅಲ್ಲದೇ ಗ್ರಾಮಗಳಲ್ಲಿ ಆಯೋಜಿಸಿರುವ ಸಮಿತಿಗಳ ಸದಸ್ಯರು ಗ್ರಾಮಸ್ಥರ ಹೇಗೆ ಸಹಕಾರ ನೀಡಬೇಕೆಂದು ತಿಳಿಸಿಕೊಡುವ ಮೂಲಕ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.