ನ್ಯೂಸ್

3600 ನೌಕರರಿಗೆ ಮೆಟಾ ಕೊಕ್

ಬಾಬುಪ್ರಸಾದ್​ ಮೋಡಿಸ್​

ನವದೆಹಲಿ: ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಂನ ಮೂಲ ಕಂಪನಿಯಾದ ಮೆಟಾ, ವಿವಿಧ ದೇಶಗಳಲ್ಲಿರುವ ತನ್ನ ಸುಮಾರು 3600 ಉದ್ಯೋಗಿಗಳನ್ನು ತೆಗೆದುಹಾಕುವ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಿದೆ.

ಈ ಕ್ರಮಕ್ಕೆ ಕಂಪನಿ ನೌಕರರ ಕಾರ್ಯಕ್ಷಮತೆ ಕೊರತೆಯ ಕಾರಣ ನೀಡಿದೆ. ಕೆಲಸದಿಂದ ತೆಗೆದುಹಾಕಿದ ಆದೇಶ ಈ ನೌಕರರಿಗೆ ಇಮೇಲ್ ಮೂಲಕ ತಲುಪಲಿದ್ದು, ನಂತರದ ಒಂದು ತಾಸಿನಲ್ಲಿ ಕಂಪನಿಯ ಎಲ್ಲ ವ್ಯವಸ್ಥೆಗಳಿಂದ ಅವರು ಸಂಪರ್ಕ ಕಳೆದುಕೊಳ್ಳಲಿದ್ದಾರೆ. ಈ ವಿಷಯವನ್ನು ಮೆಟಾ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ ಜಾನೆಲ್ ಗೇಲ್ ಅವರ ಆಂತರಿಕ ಸಂದೇಶ ಆಧರಿಸಿ ‘ಬಿಜಿನೆಸ್ ಇನ್​ಸೈಡರ್’ ವರದಿ ಮಾಡಿದೆ.

ಕೆಲಸದಲ್ಲಿ ತೃಪ್ತಿಕರ ಸಾಧನೆ ಮಾಡದವರನ್ನು ತೆಗೆದುಹಾಕಲಾಗುವುದೆಂದು ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್​ಬರ್ಗ್ ಕಳೆದ ತಿಂಗಳು ತಿಳಿಸಿದ್ದರು. ಫ್ರಾನ್ಸ್, ಜರ್ಮನಿ, ಇಟಲಿ, ನೆದರ್​ಲ್ಯಾಂಡ್ಸ್, ಏಷ್ಯಾ ಪೆಸಿಫಿಕ್, ಯೂರೋಪ್, ಮಧ್ಯಪ್ರಾಚ್ಯ, ಆಫ್ರಿಕಾ, ಉತ್ತರ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿರುವ ನೌಕರರಿಗೆ ಫೆ. 10ರಿಂದ 18ರವರೆಗಿನ ಅವಧಿಯಲ್ಲಿ ಸೇವಾಸಮಾಪ್ತಿ (ಟರ್ವಿುನೇಶನ್) ಸಂದೇಶ ತಲುಪಲಿದೆ.