ನ್ಯೂಸ್

ಅನಿಯಮಿತ ವಿದ್ಯುತ್ ಕಡಿತ; ಡಿವೈಎಫ್‌ಐ ಆಕ್ರೋಶ, ಹೋರಾಟದ ಎಚ್ಚರಿಕೆ

Mangaluru - Prakash MC Manjeshwar

ಮಂಗಳೂರು: ಕಳೆದ ಒಂದು ವಾರದಿಂದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ) ಯವರು ಯಾವುದೇ ಪ್ರಕಟಣೆ ಇಲ್ಲದೆ ಲೋಡ್ ಶೆಡ್ಡಿಂಗ್ ನಡೆಸುತ್ತಿರುವುದು ತೀರಾ ಖಂಡನೀಯ ಎಂದು ಡಿವೈಎಫ್‌ಐ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿ ಮಾಡಿರುವ ಬೆನ್ನಲ್ಲೇ ದಿನನಿತ್ಯ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ನೀತಿಯಾಗಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ಕಾರಣಗಳನ್ನು ಮೆಸ್ಕಾಂ ಅಧಿಕಾರಿಗಳ ಜತೆ ಕೇಳಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಮೆಸ್ಕಾಂ ಕಚೇರಿಗಳಲ್ಲಿ ಸಿಬ್ಬಂದಿಗೂ ಲೋಡ್ ಶೆಡ್ಡಿಂಗ್ ಬಗ್ಗೆ ಮಾಹಿತಿ ಇರುವುದಿಲ್ಲ. ವಿದ್ಯುತ್ ಅಭಾವ ಇದೆಯೇ? ಇಂಧನ ಕೊರತೆಯೇ? ವಿದ್ಯುತ್ ಖರೀದಿಗೆ ಹಣಕಾಸಿನ ಸಂಕಷ್ಟ ಇದೆಯೇ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು ಎಂದು ಡಿವೈಎಫ್‌ಐ ದಕ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈಗಾಗಲೇ ಲೋಡ್ ಶೆಡ್ಡಿಂಗ್ ನಿಂದ ರೈತರು, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಬಹುತೇಕ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದು ಅವರ ಕಲಿಕೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಮೆಸ್ಕಾಂ ಕೂಡಲೇ ಲೋಡ್ ಶೆಡ್ಡಿಂಗ್ ಕೈಬಿಟ್ಟು ಜನರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಫಲವಾದಲ್ಲಿ ಜಿಲ್ಲೆಯ ಎಲ್ಲ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.