ಮೂಡಿಗೆರೆ: ಗೋಣಿಬೀಡು ಹೋಬಳಿಯಲ್ಲಿನ ವಿದ್ಯುತ್ ಸಮಸ್ಯೆ ಶೀಘ್ರ ಬಗೆಹರಿಸಬೇಕು ಎಂದು ಒತ್ತಾಯಿಸಿ ಜನ್ನಾಪುರ ಮೆಸ್ಕಾಂ ಕಚೇರಿ ಎದುರು ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಮಳೆಗಾಲ ಆರಂಭದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದರಿಂದ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗ ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಒಂದೂವರೆ ತಿಂಗಳು ಕಳೆದರೂ ಸಮಸ್ಯೆಗೆ ಮುಕ್ತಿ ದೊರಕಿಲ್ಲ ಎಂದು ಆರೋಪಿಸಿ 2ನೇ ಬಾರಿ ಪ್ರತಿಭಟನೆ ನಡೆಸಿದರು.
ಗೋಣಿಬೀಡು, ಜನ್ನಾಪುರ, ಹಂತೂರು, ಊರುಬಗೆ, ಬೈರಾಪುರ, ದೇವರುಂದ, ಉಗ್ಗೆಹಳ್ಳಿ, ಬೆಟ್ಟದಮನೆ, ಕಿರುಗುಂದ, ಕನ್ನೆಹಳ್ಳಿ, ಉದುಸೆ, ಕಸ್ಕೇಬೈಲ್, ಕಮ್ಮರಗೋಡು, ನೀಡಗೋಡು, ಹೊಯ್ಸಳಲು, ಚಂದ್ರಪುರ, ಅಣಜೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ದಿನವಿಡೀ ನಿರಂತರವಾಗಿ ವಿದ್ಯುತ್ ಕಡಿತಗೊಳ್ಳುತ್ತಿದೆ. ದಿನದಲ್ಲಿ ಒಂದೆರಡು ಗಂಟೆಯೂ ಸರಿಯಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಇದರಿಂದ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಉಂಟಾಗಿದೆ. ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ಮೆಸ್ಕಾಂ ಕಿರಿಯ ಅಭಿಯಂತರ ರವಿಕುಮಾರ್ ಮಾತನಾಡಿ, ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಕಂಬ ಮತ್ತು ತಂತಿ ಬಿದ್ದಿರುವುದರಿಂದ ದುರಸ್ತಿ ನಡೆಸುತ್ತಿದ್ದೇವೆ. ಇನ್ನೊಂದು ತಿಂಗಳಲ್ಲಿ ಎಲ್ಲವೂ ಸರಿಯಾಗಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇನ್ನೊಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ನಯನ, ರಾಮ್ ಪ್ರಸಾದ್, ಗಿರೀಶ್, ಪ್ರಹ್ಲಾದ, ನಂದನ್, ರಘು, ಮೋಹನ್, ಜಗದೀಶ್ ಇತರರಿದ್ದರು