ಮೂಡಿಗೆರೆ: ಗುತ್ತಿಗೆ ಆಧಾರದಲ್ಲಿ 20 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಕೆಲಸದಿಂದ ತೆಗೆದುಹಾಕಿರುವ ಹೊರಗುತ್ತಿಗೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಮೆಸ್ಕಾಂ ಗುತ್ತಿಗೆ ನೌಕರರು ಮಂಗಳವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮತ್ತು ಮೆಸ್ಕಾಂ ಹೊರಗುತ್ತಿಗೆ ನೌಕರರ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಭರತ್ ಮಾತನಾಡಿ, ಮೆಸ್ಕಾಂನಲ್ಲಿ 20 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೂರಾರು ನೌಕರರನ್ನು ಗುತ್ತಿಗೆ ಅವಧಿ ಮುಗಿದಿದೆ ಎಂಬ ನೆಪವೊಡ್ಡಿ ಕೆಲಸದಿಂದ ತೆಗೆದುಹಾಕಲಾಗಿದೆ. ಮೆಸ್ಕಾಂನಿಂದ ಗುತ್ತಿಗೆ ಪಡೆದಿರುವ ಕಂಪನಿ ಸರ್ಕಾರದ ಜತೆ ಕಾನೂನು ಬದ್ಧವಾಗಿ ಮಾಡಿಕೊಂಡ ಒಪ್ಪಂದದಂತೆ ಹೊರಗುತ್ತಿಗೆ ನೌಕರರನ್ನು ರಾಜ್ಯಾದ್ಯಂತ ಹಲವು ವರ್ಷಗಳಿಂದ ನೇಮಕ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರದ ಒಪ್ಪಂದದ ರೀತಿಯಲ್ಲಿ ಗುತ್ತಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಿಲ್ಲ. ಕರ್ತವ್ಯದ ಸಂದರ್ಭದಲ್ಲಿ ಅವಘಡ ಸಂಭವಿಸಿದಾಗ ಪರಿಹಾರ ನೀಡದೆ ಸತಾಯಿಸಲಾಗಿದೆ. ಇದೀಗ ಸಬೂಬು ಹೇಳಿ ನೌಕರರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ನೌಕರರಿಗೆ ಬೇರೆ ಉದ್ಯೋಗ ಇಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ಹೊರಗುತ್ತಿಗೆ ನೌಕರ ಚಂದ್ರೇಶ್ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸುವಾಗ ಸರ್ಕಾರ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುತ್ತದೆ ಎಂದು ಸುಳ್ಳು ಆಶ್ವಾಸನೆ ನೀಡಿ ನಮ್ಮಿಂದ ದುಡಿಸಿಕೊಂಡಿದ್ದಾರೆ. ಈಗ ಏಕಾಏಕಿ ಕರ್ತವ್ಯದಿಂದ ತೆಗೆದು ಹಾಕಿದ್ದಾರೆ. ಇದರಿಂದ ನಮಗೆ ಕುಟುಂಬದ ನಿರ್ವಹಣೆ ಮಾಡಲು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸಬೇಕಾಗಿದೆ. ಸರ್ಕಾರದ ಜತೆ ಮಾಡಿಕೊಂಡ ಕರಾರಿನಂತೆ ನಡೆದುಕೊಳ್ಳದ ಗುತ್ತಿಗೆ ಕಂಪನಿಯ ವಿರುದ್ಧ ಕ್ರಮ ಕೈಗೊಂಡು ಹೊರಗುತ್ತಿಗೆದಾರರ ನೆರವಿಗೆ ಸರ್ಕಾರ ಧಾವಿಸಬೇಕು. ಕೆಲಸದಿಂದ ತೆಗೆದುಹಾಕಿರುವ ಮೆಸ್ಕಾಂ ಗುತ್ತಿಗೆ ನೌಕರರನ್ನು ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮಂಜುನಾಥ್, ನಿವೃತ್ತ ಗುತ್ತಿಗೆದಾರರಾದ ಕೆ.ಕೆ.ಚಂದ್ರಪ್ಪ, ದೀಕ್ಷಿತ್, ಚಂದ್ರೇಶ್, ಶಶಿಕುಮಾರ್, ನವೀನ್, ನಾಗೇಶ್, ಪ್ರಮೋದ್, ಜೈಪಾಲ್, ಜಗದೀಪ್, ಗೋಪಾಲ ಬಕ್ಕಿ, ಪ್ರವೀಣ್, ಅಭಿ, ಪೃಥ್ವಿ ಇತರರಿದ್ದರು.