ಕಡೂರು: ತಾಲೂಕಿನ 60 ಗ್ರಾಪಂಗಳ ಪೈಕಿ ಬಹುತೇಕ ಗ್ರಾಪಂಗಳಿಂದ ಮೆಸ್ಕಾಂಗೆ ಬರೋಬ್ಬರಿ 6.45 ಕೋಟಿ ರೂ. ಕರೆಂಟ್ ಬಿಲ್ ಬಾಕಿ ಇದೆ.
ಲಕ್ಷಗಟ್ಟಲೇ ಬಿಲ್ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳಿಗೆ ನೋಟಿಸ್ ನೀಡಿ ಸುಸ್ತಾಗಿರುವ ಮೆಸ್ಕಾಂ ಅಧಿಕಾರಿಗಳು ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ಕೊಡುತ್ತಿದೆಯಾದರೂ ಪರಿಣಾಮಕಾರಿಯಾಗಿ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು, ಬೀದಿದೀಪ, ಕಟ್ಟಡಗಳು ಸೇರಿ ವಿವಿಧ ರೀತಿಯಲ್ಲಿ ವಿದ್ಯುತ್ ಬಳಸಲಾಗುತ್ತದೆ. ಇದಕ್ಕೆ ಕಾಲಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸಿದರೆ ದೊಡ್ಡ ಮೊತ್ತದ ಬಾಕಿ ಉಳಿಯುತ್ತಿರಲಿಲ್ಲ.
ಸಕಾಲಕ್ಕೆ ಬಿಲ್ ಪಾವತಿಸದ ಕಾರಣ ಬಡ್ಡಿ, ಚಕ್ರಬಡ್ಡಿ ಸೇರಿ ಕಡೂರು-ಬೀರೂರು ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿನ ತಾಲೂಕಿನ ಗ್ರಾಪಂಗಳು ಒಳಗೊಂಡಂತೆ ಜುಲೈ ಅಂತ್ಯಕ್ಕೆ ಬರೋಬ್ಬರಿ 6.45 ಕೋಟಿ ರೂ. ಬಿಲ್‌ಬಾಕಿ ಉಳಿದರೆ, ಆಗಸ್ಟ್ ಬಿಲ್ ಸೇರ್ಪಡೆಯಾದರೆ ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ. ಮೆಸ್ಕಾಂ ಈಗಾಗಲೇ ಹಲವು ಬಾರಿ ಬಿಲ್ ಪಾವತಿಸುವಂತೆ ನೋಟಿಸ್ ಮೂಲಕ ತಿಳಿಸಿದ್ದರೂ ಗ್ರಾಪಂಗಳು ಅಲ್ಪಮೊತ್ತದ ಬಾಕಿ ಪಾವತಿಸುತ್ತಿವೆ.
ಸರ್ಕಾರ ಕೂಡ ವಿದ್ಯುತ್ ಬಿಲ್ ಬಾಕಿ ಪಾವತಿಗೆಂದು ಅಲ್ಪಸ್ವಲ್ಪ ಹಣ ಬಿಡುಗಡೆ ಮಾಡುತ್ತಿದ್ದು ಬಿಲ್ ವಸೂಲಿ ಮಾಡಲು ಇದೀಗ ಪಂಚಾಯಿತಿಗಳು ಮತ್ತು ಮೆಸ್ಕಾಂ ಧರ್ಮ ಸಂಕಟಕ್ಕೆ ಸಿಲುಕಿದಂತಾಗಿದೆ.
ಬಿಲ್ ಏರಿಕೆಗೆ ಕಾರಣ?: ಪಂಚಾಯಿತಿಗಳಲ್ಲಿನ 15ನೇ ಹಣಕಾಸು ಅನುದಾನ ಹಾಗೂ ಸರ್ಕಾರ ಬಿಡುಗಡೆ ಮಾಡುವ ಅನುದಾನಗಳಲ್ಲಿ ವಿದ್ಯುತ್ ಬಿಲ್ ಸೇರಿ ಗ್ರಾಪಂಗಳ ವೆಚ್ಚಕ್ಕೆ ಹಣ ಮೀಸಲಿಡಬೇಕು. ಆದರೆ ಕೆಲವು ಗ್ರಾಪಂಗಳಲ್ಲಿ ಈ ಅನುದಾನವನ್ನು ನಾನಾ ಕಾಮಗಾರಿಗಳಿಗೆ ಬಳಸಿಕೊಳ್ಳುವುದರಿಂದ ವಿದ್ಯುತ್ ಬಿಲ್ ಬಾಕಿಯಾಗಿ ಏರಿಕೆಗೆ ಕಾರಣವಾಗಿದೆ. ಇನ್ನೊಂದೆಡೆ ಅನಾವಶ್ಯಕವಾಗಿ ವಿದ್ಯುತ್ ಬಳಕೆಯಾಗುತ್ತಿದ್ದರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗದಿರುವ ಕೆಲ ಪಿಡಿಒಗಳ ನಿರ್ಲಕ್ಷ್ಯದಿಂದ ಪ್ರತಿ ತಿಂಗಳ ಬಿಲ್‌ನ ಮೊತ್ತ ಏರಿಕೆಯಾಗುತ್ತಿದೆ.
ಕಡೂರು ಶಾಖೆಯದು ರೂ. 5 ಕೋಟಿ: ಕಡೂರು ಗ್ರಾಮಾಂತರ, ಮತಿಘಟ್ಟ, ನಿಡಘಟ್ಟ, ಸಖರಾಯಪಟ್ಟಣಗಳ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಒಳಪಡುವ ಪಂಚಾಯಿತಿಗಳಿಂದ 5,73,64,571 ಕೋಟಿ ರೂ. ಬಿಲ್ ಜುಲೈ ಅಂತ್ಯದವರೆಗೆ ಬಾಕಿ ಉಳಿದಿದೆ. ಕೆಲವೊಂದು ಪಂಚಾಯಿತಿಗಳು ಅಳಿದುಳಿದ ಹಣವನ್ನು ಹೊಂದಿಸಿಕೊಂಡು 34,45,676 ರೂ. ಭರಿಸಿದ್ದಾರೆ. ಆದರೆ ಅನುದಾನ ಕೊರತೆಯಿಂದಾಗಿ ಬಾಕಿ ಬಿಲ್ ಪಾವತಿಯಾಗದೆ ಹಾಗೆ ಉಳಿದುಕೊಳ್ಳುತ್ತಿದೆ. ಇನ್ನು ಬೀರೂರು ಮೆಸ್ಕಾಂ ಶಾಖಾ ವ್ಯಾಪ್ತಿಗೆ ಒಳಪಡುವ ಪಂಚಾಯಿತಿಗಳಿಂದ 71.88 ಲಕ್ಷ ರೂ. ಉಳಿಸಿಕೊಂಡಿದ್ದಾರೆ. ಮೆಸ್ಕಾಂ ಅಧಿಕಾರಿಗಳು 16.63 ಲಕ್ಷ ರೂ. ವಸೂಲು ಮಾಡಿದ್ದಾರೆ. ಪರಿಣಾಮಕಾರಿಯಾಗಿ ವಸೂಲಿಗೆ ಹಿಂದೇಟು ಹಾಕುವ ಮೆಸ್ಕಾಂ ಅಧಿಕಾರಿಗಳು ಪಂಚಾಯಿತಿಗಳ ಬಾಕಿ ಬಿಲ್ ಚುಕ್ತಾ ಮಾಡಿಕೊಳ್ಳಲು ಗ್ರಾಪಂಗಳ ನಡುವೆ ಸಭೆಗಳನ್ನು ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಪ್ರತಿವರ್ಷವೂ ಬಿಲ್ ಮೊತ್ತ ಏರಿಕೆಯಾಗುವುದು ಖಚಿತ.
ಪಂಚಾಯಿತಿಗಳಲ್ಲಿ ಲಕ್ಷಗಟ್ಟಲೇ ಬಾಕಿ ಉಳಿಸಿಕೊಂಡಿರುವ ಬಿಲ್‌ನ ಮೊತ್ತವನ್ನು ಪಾವತಿಸುವಂತೆ ಹಲವು ಬಾರಿ ಗಡುವು ಕೊಟ್ಟಿದ್ದೇವೆ. ಆದರೆ ಪಂಚಾಯಿತಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕುತ್ತಿಲ್ಲ. ಅನುದಾನ ಕೊರತೆಯ ನೆಪಹೇಳಿ ದಿನ ದೂಡುತ್ತಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಬಿಲ್ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳಿಂದ ವಸೂಲಾತಿಗೆ ಕ್ರಮ ವಹಿಸಲಾಗುತ್ತದೆ ಎನ್ನುತ್ತಾರೆ ಕಡೂರಿನ ಮೆಸ್ಕಾಂ ಪ್ರಭಾರ ಎಇಇ ಸಿ.ಎನ್.ಮಂಜೇಗೌಡ.