ಮೂಡಿಗೆರೆಯ ಎಂಇಎಸ್ ಶಾಲೆ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 
ನ್ಯೂಸ್

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ

ಜಿ. ಗಜೇಂದ್ರ

ಮೂಡಿಗೆರೆ: ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ತಿಳಿಸುವ ಶಿಕ್ಷಣ ನೀಡಲು ಶಾಲೆಗಳು ಪ್ರಯತ್ನಿಸಬೇಕು ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತಚಂದ್ರ ಹೇಳಿದರು.
ಅವರು ಭಾನುವಾರ ಪಟ್ಟಣದ ಎಂಇಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಮಯೂರ ಸಂಭ್ರಮ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನತೆ ತಮ್ಮ ತಂದೆ, ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಟ್ಟಕ್ಕೆ ಇಳಿದಿಲ್ಲ. ಪಟ್ಟಣ ಪ್ರದೇಶದ ಕೆಲವರಿಂದ ಮಾತ್ರ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಅಚಾತುರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಮಾತೃ, ಪಿತೃ ಮತ್ತು ಪಾಠ ಕಲಿಸಿದ ಗುರುವಿಗೆ ಗೌರವ ನೀಡುವಂತಹ ಮೌಲ್ಯಯುತ ಶಿಕ್ಷಣ ನೀಡಬೇಕಿದೆ ಎಂದು ಆಶಿಸಿದರು.
ಹರೀಶ್ ಎಜುಕೇಷನ್ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಎಸ್.ಹರೀಶ್ ಮಾತನಾಡಿ, ನಾನು ಶಿಕ್ಷಣ ಸಂಸ್ಥೆ ಆರಂಭಿಸಿ 25 ವರ್ಷಗಳಾಗಿವೆ. ಬಡವರಿಗೂ ಕೈಗೆಟುಕುವಂತೆ ಸಿಬಿಎಸ್‌ಇ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂದರು.
ಎಂಇಎಸ್ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಿರುತೆರೆ ಹಾಸ್ಯ ಕಲಾವಿದ ಮಂಜು ಪಾವಗಡ, ಎಂಇಎಸ್ ಶಾಲೆ ಆಡಳಿತಾಧಿಕಾರಿ ಡಿ.ಆರ್.ಚಿಂತು ಇತರರಿದ್ದರು.