ಸಾಗರ: ಸಂಗೀತ, ನೃತ್ಯ ಕೇವಲ ಮನರಂಜನೆಗಲ್ಲ. ಅದರಿಂದ ಮನೋವಿಕಾಸವು ಆಗುತ್ತದೆ. ಸತತ ನೃತ್ಯಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಉದ್ಯಮಿ ಹೆಗ್ಗೋಡಿನ ವಿಠ್ಠಲ ಪೈ ಹೇಳಿದರು.
ಸಾಗರದ ಗಾಂಧಿ ಮೈದಾನದಲ್ಲಿ ಸ್ಟೈಲ್ ಡಾನ್ಸ್ ಅಕಾಡೆಮಿಯಿಂದ ಏರ್ಪಡಿಸಿದ್ದ 16ನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ಅವರು, ನೃತ್ಯ ಅಭ್ಯಾಸದಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂದರು.
ಸ್ಟೈಲ್ ಡಾನ್ಸ್ ಅಕಾಡೆಮಿಯಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ರೀತಿಯ ನೃತ್ಯ ಕಲಿಸುತ್ತಿದ್ದಾರೆ. ಮಕ್ಕಳು ಇಂತಹ ನೃತ್ಯ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಸದೃಢತೆ ಕಾಪಾಡಿಕೊಳ್ಳಬಹುದು. ಪಾಲಕರು ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ನೃತ್ಯಪಟು ಸೂರಜ್ ತಮ್ಮ ಅಕಾಡೆಮಿಯಿಂದ 16 ವರ್ಷಗಳಿಂದ ನೃತ್ಯ ತರಬೇತಿ ನೀಡಿ ಪೋಷಿಸುತ್ತಿರುವುದು ಶ್ಲಾಘನೀಯ. ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಸ್ಟೈಲ್ ಡಾನ್ಸ್ ಅಕಾಡೆಮಿ ನೃತ್ಯ ಶಿಕ್ಷಕ ಸೂರಜ್, ಪವನ್, ಕೆ.ಎಂ.ಪ್ರವೀಣ್, ಮಂಜುನಾಥ ಬಾಳೂರು, ಶಂಕ್ರು ಸಂದೀಪ್, ಗುರುಮೂರ್ತಿ, ಎಸ್.ಆರ್.ಶ್ರೀನಿವಾಸ್, ಸಿಬಿನ್ ಸೋಮನ್, ರೇಖಾ, ದಿನಕರ, ಅನಿಲಕುಮಾರ್, ನಂದೀಶ್, ಲೋಕೇಶ್ ಇತರರಿದ್ದರು. ಅಪಘಾತರಹಿತವಾಗಿ ಬಸ್ ಚಾಲನೆ ಮಾಡಿದ ನಿವೃತ್ತ ಬಸ್ ಚಾಲಕ ರಾಜು ನಾಯರ್ ಅವರನ್ನು ಸನ್ಮಾನಿಸಲಾಯಿತು. ನಂತರ ನೃತ್ಯಪ್ರದರ್ಶನ ನಡೆಯಿತು.