ಹೊಸನಗರ: ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರು ಮತ್ತು ಗುರಿ ಮುಖ್ಯ. ಮಹತ್ತರ ಸಾಧನೆಗೆ ಇದು ಸಹಕಾರಿ ಆಗಲಿದೆ ಎಂದು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಪ್ರವೀಣ್ ತಿಳಿಸಿದರು.
ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹೊಸನಗರ ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉದ್ದೀಪನಗೊಳಿಸುವ ಜತೆಗೆ ಏಕಾಗ್ರತೆ ಹೆಚ್ಚಿಸುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಕ್ರೀಡೆಯನ್ನು ಸ್ಫೂರ್ತಿಯಿಂದ ಸ್ವೀಕರಿಸಬೇಕೇ ವಿನಃ ಅದು ವಿದ್ಯಾರ್ಥಿಗಳ ನಡುವೆ ಪರಸ್ಪರ ದ್ವೇಷಕ್ಕೆ ನಾಂದಿ ಆಗಬಾರದು. ಕ್ರೀಡಾಪಟುಗಳಿಗೆ ಕ್ರೀಡಾ ಭಾವನೆ ಅತಿಮುಖ್ಯ. ಇತ್ತೀಚೆಗೆ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸುತ್ತಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ರೆಡ್ಡಿ, ಪ್ರಭಾರ ಬಿಇಒ ಆರ್.ಪಿ.ಚೇತನ್, ಎಂ.ಗುಡ್ಡೇಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಮುಂಬಾರು ಗ್ರಾಪಂ ಅಧ್ಯಕ್ಷ ಎನ್.ಕುಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಇಸಿಒ ಕರಿಬಸಪ್ಪ, ಸಿಆರ್‌ಪಿ ವೆಂಕಟೇಶ್, ಶಿಕ್ಷಕರಾದ ಬಸವಣ್ಣಪ್ಪ, ವಿ.ರಂಗಸ್ವಾಮಿ, ಲಿಲ್ಲಿ ಡಿಸೋಜ, ಧನಂಜಯ್, ರಾಜುರೆಡ್ಡಿ, ವಿನಯ್ ಹೆಗ್ಡೆ, ಎಂ.ಪಿ ಚಂದ್ರಶೇಖರ್ ಇತರರಿದ್ದರು.