ನ್ಯೂಸ್

ಚರಂಡಿಯಿಂದ ಎದ್ದು ಬಂದಾತ ಒಳಗಡೆ ಇನ್ನೂ 30 ಜನ ಇದ್ದಾರೆ ಅಂದ..!

ಬೆಂಗಳೂರು: ಚರಂಡಿ ಒಂದರಿಂದ ಏಕಾಏಕಿ ಮೇಲೆ ಬಂದ ವ್ಯಕ್ತಿಯೊಬ್ಬ, ಈ ಚರಂಡಿಯಲ್ಲಿ ಇನ್ನೂ 30 ಜನ ಇದ್ದಾರೆ ಎಂದು ಹೇಳಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಒಂದು ತಾಸು ಚರಂಡಿಯನ್ನು ಪರಿಶೀಲಿಸಿ ಹೈರಾಣಾದ ಘಟನೆ ಶನಿವಾರ ನಡೆದಿದೆ.

ಯಶವಂತಪುರದ ಎಂಇಐ ಸಿಗ್ನಲ್ ಬಳಿ ಬೆಳಗ್ಗೆ 11.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆ ಬಂದಿದ್ದಾನೆ. ಈತನನ್ನು ನೋಡಿದ ಸ್ಥಳೀಯರು ಪ್ರಶ್ನಿಸಿದಾಗ, ‘ನಾನು ಶ್ರೀರಾಮಪುರದಿಂದ ಇಲ್ಲಿಗೆ ಚರಂಡಿಯೊಳಗೆ ಬಂದಿದ್ದೇನೆ. ಇನ್ನೂ 30 ಜನ ಚರಂಡಿ ಒಳಗೆ ಇದ್ದಾರೆ’ ಎಂದು ಹೇಳಿದ್ದಾನೆ. ಈತನ ಮಾತಿನಿಂದ ಬೆಚ್ಚಿದ ಸ್ಥಳೀಯರು, ಯಾರೋ ಚರಂಡಿಯೊಳಗೆ ಸಿಲುಕಿರಬೇಕು ಎಂದು ಭಾವಿಸಿ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸ್ಥಳಕ್ಕೆ ದೌಡಾಯಿಸಿ ಸುಮಾರು ಒಂದು ತಾಸು ಚರಂಡಿಯನ್ನು ಪರಿಶೀಲಿಸಿದ್ದಾರೆ. ಆದರೆ, ಚರಂಡಿಯಲ್ಲಿ ಯಾರೊಬ್ಬರೂ ಪತ್ತೆಯಾಗಿಲ್ಲ. ಬಳಿಕ ಚರಂಡಿಯಿಂದ ಮೇಲೆ ಬಂದಿದ್ದ ವ್ಯಕ್ತಿಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ ಸಮಾಧಾನದಿಂದ ಪ್ರಶ್ನೆ ಮಾಡಿದಾಗ, ‘ನಾನು ರಾಕೇಟ್‌ನಲ್ಲಿ ಇಲ್ಲಿಗೆ ಬಂದೆ ಎಂದಿದ್ದಾನೆ. ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಈ ವ್ಯಕ್ತಿ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ. ಹೆಸರು ಕೇಳಿದರೆ, ರಾಜು ಎಂದು ಹೇಳಿದ್ದಾನೆ. ಕುಟುಂಬದ ಬಗ್ಗೆ ವಿಚಾರ ಮಾಡಿದರೆ, ಗೊಂದಲದ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.