ನ್ಯೂಸ್

VIDEO | ಹೈ ಹೀಲ್ಡ್‌ ಶೂ ಧರಿಸಿ ನಡೆದ ಪುರುಷರು; ಕಾರಣವೇನು ಗೊತ್ತಾ?

ನವದೆಹಲಿ: ಹುಡುಗಿಯರು ಹೈ ಹೀಲ್ಡ್ ಧರಿಸಿ ಹೆಜ್ಜೆ ಹಾಕುವುದನ್ನು ನೀವು ನೋಡಿರಬಹುದು. ಆದರೆ  ಪುರುಷರು ಹೈ ಹೀಲ್ಡ್‌ ಧರಿಸಿ ನಡೆಯುವುದನ್ನು ಎಂದಾದರೂ ನೋಡಿದ್ದೀರಾ.  ಆದರೆ ಇಲ್ಲಿ ಕೆಲವು ಪುರುಷರು ಹೈ ಹೀಲ್ಡ್ ಶೂ ಧರಿಸಿ ನಡೆದಿದ್ದಾರೆ. ಈ ಕಾರ್ಯದ ಹಿಂದೆ ಒಂದು ಮಹತ್ತರವಾದ ಉದ್ದೇಶ ಇದೆ.

ಒಂದು ಎನ್‌ಜಿಒ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸಾಚಾರ, ಅತ್ಯಾಚಾರ ತಡೆಗಟ್ಟುವ ಸಲುವಾಗಿ ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ  'ವಾಕ್ ಎ ಮೈಲ್ ಇನ್‌ ಹರ್ ಶೂ' ಎಂಬ ಈ ಕಾರ್ಯಕ್ರಮವನ್ನು ಪ್ರತಿವರ್ಷವೂ ಸಂಸ್ಥೆ ಪಾಶ್ಚಿಮಾತ್ಯ ದೇಶಗಳಲ್ಲಿ ಏರ್ಪಡಿಸುತ್ತಾ ಬರುತ್ತಿದೆ. ಅದೇ ರೀತಿ ಈ ಬಾರಿ ಜಮೈಕಾದ ಮಂಡೆವಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

'ವಾಕ್ ಎ ಮೈಲ್ ಇನ್‌ ಹರ್ ಶೂ' ಎಂಬ ಈ ಜಾಥಾದಲ್ಲಿ ನೂರಾರು ಪುರುಷರು, ಸ್ತ್ರೀಯರು ಬಳಸುವ ಕೆಂಪು ಬಣ್ಣದ ಹೈ ಹೀಲ್ಡ್‌ ಶೂ ಧರಿಸಿ ಮೈಲು ದೂರ ನಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್ ವೈರಲ್​​ ಆಗಿದೆ.

ಸ್ವ ಇಚ್ಛೆಯಿಂದ ಈ ಜಾಥಾದಲ್ಲಿ ಭಾಗವಹಿಸುತ್ತಾರೆ. ಈ ಜಾಥಾದಲ್ಲಿ ಭಾಗವಹಿಸುವುದಕ್ಕೆ ಪ್ರವೇಶ ಶುಲ್ಕವಿದ್ದು,  ಒಬ್ಬರಿಗೆ 17 ಡಾಲರ್ ಪ್ರವೇಶ ಶುಲ್ಕವಿದೆ.  ಸಂಗ್ರಹವಾದ ಹಣವನ್ನು  ಆಯಾ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸುವ ಎನ್‌ಜಿಒಗಳು ಪಡೆದು ಕೌಟುಂಬಿಕ ದೌರ್ಜನ್ಯ, ಹಿಂಸಾಚಾರ, ಅತ್ಯಾಚಾರ ಮುಂತಾದ ತೊಂದರೆಗಳಿಂದ ನೊಂದ ಸಂತ್ರಸ್ತರ ಬದುಕನ್ನು ಸುಗಮಗೊಳಿಸಲು ಬಳಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅಂದೇ ಬಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ.  ಹೈ  ಹೀಲ್ಡ್‌ ಧರಿಸಿ ವೇಗವಾಗಿ ನಡೆದು ಗುರಿಮುಟ್ಟಿದವರಿಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ.