ಗುವಾಹಟಿ: ಲವ್ ಜಿಹಾದ್ ಕಾನೂನು ವಿಚಾರ ದೇಶಾದ್ಯಂತ ಚರ್ಚೆಗೀಡಾಗಿರುವ ಬೆನ್ನಲ್ಲೇ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಸರ್ಮಾ , ಪುರುಷರೆಲ್ಲರೂ ಅವರವರ ಧರ್ಮ, ಉದ್ಯೋಗ, ಆದಾಯ ಘೋಷಿಸಿಯೇ ಮದುವೆ ಮಾತುಕತೆ ಮುಂದುವರಿಸಬೇಕು. ಈ ಅಂಶವನ್ನು ಒಳಗೊಂಡ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ಮಸೂದೆಯನ್ನು ರಚಿಸಲಾಗುತ್ತಿದೆ. ಪತಿ-ಪತ್ನಿಯ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಎಲ್ಲ ವಿಷಯಗಳನ್ನೂ ಪರಸ್ಪರ ಅರಿತಿರಬೇಕು. ಮುಖ್ಯವಾಗಿ ಧರ್ಮ, ಉದ್ಯೋಗ, ಆದಾಯದ ವಿಚಾರದಲ್ಲಿ ವಂಚನೆ, ಮೋಸ ನಡೆಯಬಾರದು. ಸಂಸಾರ ನಡೆಸುವಲ್ಲಿ ಇವು ಅತ್ಯಂತ ಪ್ರಾಮುಖ್ಯವಿಚಾರಗಳಾಗಿವೆ.
ಲವ್ ಜಿಹಾದ್ ತಡೆಯುವುದಕ್ಕೆ ಇರುವ ಕಾನೂನು ಇದು ಎಂಬ ವ್ಯಾಖ್ಯೆ ಬೇಕಾಗಿಲ್ಲ. ಅದನ್ನು ಮೀರಿದ ಮಸೂದೆ ಇದಾಗಿದ್ದು, ಸಮಾಜದ ಹಿತದೃಷ್ಟಿ, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಗಮನಿಸಬೇಕು. ಎಲ್ಲ ಧರ್ಮದವರಿಗೂ, ಜಾತಿಯವರಿಗೂ, ಸಮುದಾಯದವರಿಗೂ ಈ ಕಾನೂನು ಅನ್ವಯವಾಗಲಿದೆ ಎಂದು ಹಿಮಂತ ಬಿಸ್ವಾ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)