ನಾಪೋಕ್ಲು: ಸಂಘ ಸಂಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯರು ಸದೃಢ ಕಟ್ಟಡದ ಒಂದೊಂದು ಕಂಬಗಳಿದ್ದಂತೆ. ಆದ್ದರಿಂದ ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವ ಮುಖ್ಯ ಎಂದು ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಆಮೆ ದಮಯಂತಿ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚೇರಂಬಾಣೆ ಗೌಡ ಮಹಿಳಾ ನೂತನ ಒಕ್ಕೂಟವನ್ನು (ಅನಾವರಣ) ಉದ್ಘಾಟಿಸಿ ಹಾಗೂ ನೂತನ ಸಮಿತಿಗೆ ಅಭಿನಂದನೆ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯಲ್ಲಿ ವಿವಿಧ ಕಲಾ ಪ್ರತಿಭೆಗಳಿರುತ್ತವೆ. ಒಂದು ಕಡ್ಡಿಯಿಂದ ಕಸ ಗುಡಿಸಲಾಗದು. ಒಗ್ಗಟ್ಟಿನಲ್ಲಿ ಬಲವಿದೆ. ಸದಸ್ಯರು ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಒಕ್ಕೂಟದ ಸದಸ್ಯತ್ವ ನೋಂದಣಿ ಪುಸ್ತಕವನ್ನು ಚೇರಂಬಾಣೆ ಗೌಡ ಸಮಾಜದ ನಿರ್ದೇಶಕರಾದ ನೆಯ್ಯಣಿ ಹೇಮಲತಾ ತಾರೆಂದ್ರ ಅವರು ಅನಾವರಣಗೊಳಿಸಿ ಮಾತನಾಡಿ, ಬಹಳ ವರ್ಷಗಳ ಮನವಿಯ ಫಲಶೃತಿಯಾಗಿ ನೂತನ ಒಕ್ಕೂಟ ರಚನೆಯಾಗಿದೆ. 16 ಗ್ರಾಮಗಳ ಸಮ್ಮಿಲನ ಈ ಒಕ್ಕೂಟವಾಗಿದ್ದು ಉತ್ತಮ ಕಾರ್ಯಚಟುವಟಿಕೆ ಮೂಲಕ ಪ್ರಗತಿ ಕಾಣಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೈಮನ ಅನುಜಾ ಹರೀಶ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ಒಕ್ಕೂಟಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಚೆರಂಬಾಣೆ ವ್ಯಾಪ್ತಿಗೆ ಬರುವ ಎಲೆಮರೆಯಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಒಕ್ಕೂಟದ ಮೂಲಕ ವೇದಿಕೆ ಕಲ್ಪಿಸಿಕೊಡಲಾಗುವುದು. ತರಬೇತಿ ಶಿಬಿರಗಳು ಸೇರಿದಂತೆ ಸಮಾಜಮುಖಿ ಕಾರ್ಯಗಳೊಂದಿಗೆ ಒಕ್ಕೂಟ ನಡೆಸಲಾಗುವುದು. ಆದ್ದರಿಂದ ಸರ್ವರೂ ಸಮಾನ ಮನಸ್ಕರಾಗಿ ಶ್ರಮಿಸಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು. ನೂತನ ಒಕ್ಕೂಟದ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರೆ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಸ್ವಾಗತಿಸಿದರು. ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿ, ಕೊಡಪಾಲು ತೀರ್ಥ ಗಣಪತಿ ವಂದಿಸಿದರು.