ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರು ವಿದೇಶಕ್ಕೆ ತೆರಳಿದ್ದಾರೆ.
ಹೆಂಡತಿ ಮತ್ತು ಮಕ್ಕಳನ್ನು ನೋಡಲು ದರ್ಶನ್ ಪುಟ್ಟಣ್ಣಯ್ಯ ಅವರು ಅಮೆರಿಕಗೆ ತೆರಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆಂದು ದರ್ಶನ್ ಅವರು ಐದು ತಿಂಗಳ ಹಿಂದೆ ಮಂಡ್ಯಗೆ ಬಂದಿದ್ದರು. ಚುನಾವಣೆ ಮುಗಿದು ಜಯಶಾಲಿಯಾಗಿರುವ ದರ್ಶನ್ ಅವರು ಕೊಂಚ ಬಿಡುವು ಮಾಡಿಕೊಂಡು ಇದೀಗ ಹೆಂಡತಿ ಮಕ್ಕಳನ್ನು ನೋಡಲು ಅಮೆರಿಕಗೆ ತೆರಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ದರ್ಶನ್, ಪತ್ನಿ ಮತ್ತು ಮಕ್ಕಳನ್ನು ನೋಡಿ 5 ತಿಂಗಳು ಆಗಿವೆ. ಹೀಗಾಗಿ ಅವರನ್ನು ನೋಡಲು ಅಮೆರಿಕಗೆ ಹೋಗುತ್ತಿದ್ದೇನೆ. 10 ದಿನಗಳ ಬಳಿಕ ವಾಪಸ್ ಬರುತ್ತೇನೆ. ಅಲ್ಲಿಯವರೆಗೂ ಎಲ್ಲರೂ ಶಾಂತಿಯಿಂದ ಇರಬೇಕು. ಜನರಿಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ನಂಬರ್‌ಗೆ ಕರೆ ಮಾಡಿ. ನಮ್ಮ ಕಡೆಯವರು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅಮೆರಿಕದಿಂದ ಬಂದು ಎಲ್ಲರನ್ನು ಕಾಣುತ್ತೇನೆ ಎಂದು ಅಮೆರಿಕಗೆ ಹೊರಡುವ ಮುನ್ನ ವಿಡಿಯೋ ಸಂದೇಶವನ್ನು ಹರಿಬಿಟ್ಟಿದ್ದಾರೆ.
ಅಂದಹಾಗೆ ದರ್ಶನ್ ಪುಟ್ಟಣ್ಣಯ್ಯ ಅವರು ಪುಟ್ಟರಾಜು ವಿರುದ್ಧ ಜಯ ದಾಖಲಿಸಿದರು. ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಸ್ಪರ್ಧಿಸಿದರು. ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಬೆಂಬಲ ನೀಡಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಮೇಲೆ ಜನರ ನಿರೀಕ್ಷೆ ತುಂಬಾ ಇದೆ. (ದಿಗ್ವಿಜಯ ನ್ಯೂಸ್)