ಮೇಕೆದಾಟು ಪಾದಯಾತ್ರೆ ವೇಳೆ ಸೋಮವಾರ ಕನಕಪುರ ತಾಲೂಕಿನ ದೊಪ್ಪಲೇಗೌಡನ ದೊಡ್ಡಿಯಲ್ಲಿನ ವಿಶ್ವೋದಯ ಶಾಲೆಗೆ ತೆರಳಿದ ಡಿ.ಕೆ.ಶಿವಕುಮಾರ್ ಮಕ್ಕಳೊಂದಿಗೆ ನಮ್ಮ ನೀರು-ನಮ್ಮ ಹಕ್ಕು ಎಂದು ಘೊಷಣೆ ಕೂಗಿಸಿದರು. 
ನ್ಯೂಸ್

ಕನಕಪುರ ಮುಟ್ಟಿದ ಮೇಕೆದಾಟು ನಡಿಗೆ: ದಾರಿಯುದ್ದಕ್ಕೂ ಡಿಕೆಶಿಗೆ ಪೂರ್ಣಕುಂಭ ಸ್ವಾಗತ; ಕೊರಗಜ್ಜನ ಫೋಟೋಗೆ ಗಂಟೆಗೊಮ್ಮೆ ನಮಸ್ಕಾರ

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಏದುಸಿರು ಬಿಡುತ್ತಲೇ ಎರಡನೇ ದಿನ ಪೂರೈಸಿದೆ. ಮೊದಲ ದಿನ ಮೇಕೆದಾಟು ಸಮೀಪದ ಸಂಗಮದಿಂದ ಆರಂಭವಾದ ಯಾತ್ರೆ ರಾತ್ರಿ ದೊಡ್ಡ ಆಲಹಳ್ಳಿ ತಲುಪಿತ್ತು. ಬೆಳಗ್ಗೆ ದೊಡ್ಡ ಆಲಹಳ್ಳಿಯಿಂದ ಆರಂಭವಾಗಿ ಮಧ್ಯಾಹ್ನ ಭೋಜನ ಹಾಗೂ ವಿರಾಮಕ್ಕಾಗಿ ಮಾದಪ್ಪನ ದೊಡ್ಡಿಯಲ್ಲಿ ಆಶ್ರಯ ಪಡೆಯಿತು. ಸೂರ್ಯನ ಅಬ್ಬರ ತಗ್ಗುತ್ತಿದ್ದಂತೆ ಕನಕಪುರ ತಲುಪಿ ದಿನದ ಚಟುವಟಿಕೆ ಕೊನೆಗೊಳಿಸಿತು. ಹೋರಾಟ ಘೊಷಣೆಯಾದ ದಿನದಿಂದಲೂ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ವಾಕ್​ಸಮರ ಮುಂದುವರಿಯುತ್ತಲೇ ಇದೆ. ಭಾನುವಾರ ಕೆಲವು ಘಟನೆಗಳ ವಿಡಿಯೋ ಮುಂದಿಟ್ಟುಕೊಂಡು ಟ್ರೋಲ್ ಮಾಡಿದ್ದು, ಕರೊನಾ ಟೆಸ್ಟ್ ಮಾಡಲು ಅಧಿಕಾರಿಗಳು ಬಂದದ್ದು ಹಾಗೂ ಚಾಲನೆ ಕಾರ್ಯಕ್ರಮದಲ್ಲಿದ್ದ 31 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿದ ವಿಷಯಗಳಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಷ್ಟು ಕೆರಳಿದ್ದರೂ, ಸೋಮವಾರ ಸಾವಿರಾರು ಕಾರ್ಯಕರ್ತರ ಮಧ್ಯದಲ್ಲಿ ಪಾದಯಾತ್ರೆ ಪೂರ್ಣಗೊಳಿಸಿದರು.

ಬೆಳಗ್ಗೆ 9.30ಕ್ಕೆ ದೊಡ್ಡ ಆಲಹಳ್ಳಿಯಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಪೂರ್ಣಕುಂಭ ಸ್ವಾಗತ, ಕಲಾ ತಂಡಗಳು, ವಾದ್ಯಗಳೊಂದಿಗೆ ಡಿ.ಕೆ.ಶಿವಕುಮಾರ್ ಅವರನ್ನು ಪ್ರತಿ ಗ್ರಾಮದ ಬಳಿ ಸ್ವಾಗತಿಸಲಾಯಿತು. ಮಧ್ಯಾಹ್ನ 2.40ರ ಸುಮಾರಿಗೆ 7 ಕಿ.ಮೀ. ಕ್ರಮಿಸಿ ಮಾದಪ್ಪನದೊಡ್ಡಿ ತಲುಪಿತು. ಅಲ್ಲಿ ಊಟ ಮಾಡಿ, ಕೆಲಕಾಲ ವಿಶ್ರಾಂತಿ ಪಡೆದ ಡಿಕೆಶಿ ಸುದ್ದಿಗೋಷ್ಠಿ ನಡೆಸಿ, ಸಂಜೆ 5 ಗಂಟೆಗೆ ಅಲ್ಲಿಂದ ಮತ್ತೆ ಪಾದಯಾತ್ರೆ ಮುಂದುವರಿಸಿ ರಾತ್ರಿ 8 ಗಂಟೆಗೆ ಕನಕಪುರ ತಲುಪಿದರು. ದಾರಿಯುದ್ದಕ್ಕೂ ಚಾಮರಾಜನಗರ ಮತ್ತು ಮಡಿಕೇರಿಯಿಂದ ನೂರಾರು ಬಸ್​ಗಳಲ್ಲಿ ಬಂದಿದ್ದ ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದರು. ನಂತರ ಡಿ ಕೆ.ಶಿವಕುಮಾರ್, ಮರಳೇಬೇಕುಪ್ಪೆಯಲ್ಲಿನ ರೆರ್ಸಾಟ್​ಯೂಂದರಲ್ಲಿ ಅರ್ಧ ಗಂಟೆ ವಿರಮಿಸಿ, ಅಲ್ಲಿಂದ ಮುಂದೆ ಮರಳೇಗವಿ ಮಠಕ್ಕೆ ಭೇಟಿ ನೀಡಿ, ಡಾ.ಮುಮ್ಮಡಿ ಶಿವರುದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಇನ್ನೂ ದಾರಿಯುದ್ದಕ್ಕೂ ಅಲ್ಲಲ್ಲಿ ಡಿಕೆಶಿಗೆ ಮಹಿಳೆಯರು ದೃಷ್ಟಿ ತೆಗೆದು ಶುಭ ಹಾರೈಸಿದರು. ಆರಾಧ್ಯ ದೈವ ಕೊರಗಜ್ಜನ ಫೋಟೋವನ್ನು ಕಿಸೆಯಲ್ಲಿಯೇ ಇಟ್ಟುಕೊಂಡು ಓಡಾಡುತ್ತಿದ್ದ ಡಿಕೆಶಿ, ಗಂಟೆಗೊಮ್ಮೆ ಫೋಟೊಗೆ ನಮಸ್ಕರಿಸುತ್ತ ಪಾದಯಾತ್ರೆ ಮಾಡಿದರು.

ಅಧಿಕಾರಿಗೇ ಪಾಸಿಟಿವ್: ಭಾನುವಾರ ರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೊನಾ ಟೆಸ್ಟ್​ಗೆ ಮನವೊಲಿಸಲು ಬಂದಿದ್ದ ರಾಮನಗರ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಡಿಎಚ್​ಒ ಡಾ.ಬಿ.ಎಸ್.ನಿರಂಜನ್, ಎಡಿಸಿ ಜವರೇಗೌಡ ದೊಡ್ಡ ಆಲಹಳ್ಳಿಗೆ ತೆರಳಿ ಡಿಕೆಶಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಈ ವೇಳೆ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಡಿಕೆಶಿ, ನಿಮ್ಮ ಹೆಲ್ತ್ ಮಿನಿಸ್ಟರ್​ಗೆ ಹೇಳಿ, ಯಾರೋ ಬಚ್ಚಾ ಹತ್ತಿರ ಆಟ ಆಡ್ಲಿ ಅವನು. ಬೇಕಿದ್ದರೆ ಅವನೇ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಹೇಳುವ ಮೂಲಕ ವಾಪಸ್ ಕಳುಹಿಸಿದ್ದರು. ಆದರೆ, ಸೋಮವಾರ ಜವರೇಗೌಡರಿಗೆ ರ್ಯಾಟ್ ಟೆಸ್ಟ್ ಮಾಡಲಾಗಿದ್ದು, ಸೋಂಕು ದೃಢಪಟ್ಟಿದೆ. ಇದನ್ನು ಡಿಕೆಶಿ ತಮ್ಮ ವಿರುದ್ಧ ಸರ್ಕಾರ ಮಾಡಿರುವ ಸಂಚು ಎಂದು ಆರೋಪಿಸಿದ್ದಾರೆ.

ನನ್ನ ಬಳಿಯೇ 100 ವೈದ್ಯರು ಇದ್ದಾರೆ, ನಿಮ್ಮ ನೆರವು ನನಗೆ ಬೇಡ. ನನಗೆ ಸೋಂಕಿತರ ಸಂಪರ್ಕ ಇದೆ ಎಂದು ಪಾದಯಾತ್ರೆ ತಡೆಯುವ ಹುನ್ನಾರವನ್ನು ಸರ್ಕಾರ ಮಾಡಿದೆ. ನನ್ನ ಮೇಲೆ ಕೇಸ್ ಹಾಕಿದರೆ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ಕೇಸ್ ಹಾಕೋದಷ್ಟೇ ನಿಮ್ಮ ಅಧಿಕಾರ. ನಾನು ತಿಹಾರ್ ಜೈಲು ನೋಡಿದ್ದೇನೆ. ರಾಮನಗರ ಜೈಲು ನೋಡೋದು ಬಾಕಿ. ಸಿಎಂ ಅವರಿಂದ ಇಂತಹ ನೀಚ ರಾಜಕೀಯ ನಿರೀಕ್ಷಿಸಿರಲಿಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಇಂದು ಕೋರ್ಟಲ್ಲಿ ವಿಚಾರಣೆ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರಲು ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಯೋಜನೆಗೆ ಸಂಬಂಧಿಸಿದ ಪ್ರಕರಣ ಸವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿದೆ. ಮೇಕೆದಾಟು ಸಮತೋಲನ ಜಲಾಶಯ ನಿರ್ವಣದ ಕುರಿತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಚೆನ್ನೈ ಪೀಠ ನೀಡಿದ್ದ ತಡೆಯಾಜ್ಞೆಯನ್ನು ನವದೆಹಲಿಯ ರಾಷ್ಟ್ರೀಯ ಹಸಿರು ಮಂಡಳಿಯ ಪ್ರಧಾನ ನ್ಯಾಯಪೀಠ ತೆರವುಗೊಳಿಸಿತ್ತು. ಅದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸವೋಚ್ಛ ನ್ಯಾಯಾಲಯ ಜ.11ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುತ್ತಿದೆ. ಈ ಮೊದಲು ಜನವರಿ 3ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಈ ಅರ್ಜಿಯನ್ನು ಜನವರಿ 27ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು. ನ್ಯಾಯಾಲಯದಲ್ಲಿ ನಡೆಯುವ ಬೆಳವಣಿಗೆ ಮೇಲೆ ಕಾವೇರಿ ನಿರ್ವಹಣಾ ಮಂಡಳಿ ಮೇಕೆದಾಟು ಯೋಜನೆ ಕುರಿತು ತೀರ್ಮಾನ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕಾವೇರಿ ನಿರ್ವಹಣಾ ಮಂಡಳಿಯ ಒಪ್ಪಿಗೆ ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಪರಿಸರ ನಿರಾಕ್ಷೇಪಣಾ ಪತ್ರ ಯೋಜನೆ ಆರಂಭಕ್ಕೆ ಅಗತ್ಯವಾಗಿದೆ.

ಏಕಾಂಗಿ ಹೋರಾಟ: ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶಿವರಾಜ್ ತಂಗಡಗಿ, ವಿನಯ್ ಕುಲಕರ್ಣಿ, ಉಮಾಶ್ರೀ, ಧ್ರುವನಾರಾಯಣ, ಸಲೀಂ ಅಹ್ಮಮದ್, ಪ್ರಿಯಕೃಷ್ಣ, ಎಚ್.ಆಂಜನೇಯ, ಬಿ.ಕೆ.ಹರಿಪ್ರಸಾದ್ ಮುಂತಾದವರು ಪಾಲ್ಗೊಂಡಿದ್ದರೂ ಯಾರೂ ಒಟ್ಟಿಗೆ ಪಾದಯಾತ್ರೆ ಮಾಡಲೇ ಇಲ್ಲ. ಎಲ್ಲರೂ ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಮುಂದೆ ಸಾಗಿದರೆ ಡಿಕೆಶಿ ಏಕಾಂಗಿ ಆಗಿಯೇ ಪಾದಯಾತ್ರೆ ಮಾಡಿದರು.

ಪ್ರಚಾರಕ್ಕೆ ವೈಯಕ್ತಿಕ ತಂಡ: ಹಲವು ಶಾಸಕರು ತಮ್ಮ ಪರ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡಲು ತಂಡವನ್ನೇ ಕರೆತಂದಿರುವುದು ಈ ಯಾತ್ರೆಯ ವಿಶೇಷವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪಾದಯಾತ್ರೆಯ ಅಪ್​ಡೇಟ್ ಮಾಡಿಕೊಳ್ಳುತ್ತಾ, ಆಗಿಂದಾಗ್ಗೆ ಲೈವ್ ಮಾಡಿಸಿಕೊಳ್ಳುತ್ತಾ ತಮ್ಮ ತೊಡಗಿಕೊಳ್ಳುವಿಕೆಯನ್ನು ದಾಖಲಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್​ಗೆ ಸಿಎಂ ಆಗುವ ತವಕ. ಅದಕ್ಕಾಗಿ ಮೇಕೆದಾಟು ಯೋಜನೆಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯರನ್ನು ಬದಿಗೆ ಸರಿಸಿ ಸಿಎಂ ಆಗುವುದಕ್ಕೆ ಹೊರಟಿದ್ದಾರೆ. ಡಿಕೆಶಿ ಒಂದು ರೀತಿ ದಾದಾಗಿರಿ ಮಾಡುತ್ತಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ಅಲ್ಲ. ಕೇಡಿ ಶಿವಕುಮಾರ್ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. | ಕೆ.ಎಸ್.ಈಶ್ವರಪ್ಪ ಸಚಿವ

ಜನರ ಸುರಕ್ಷತೆಯೇ ಸರ್ಕಾರಕ್ಕೆ ಮುಖ್ಯ

ಬೆಂಗಳೂರು: ರಾಜ್ಯದ ಜನರನ್ನು ಸುರಕ್ಷೆಯ ಕಕ್ಷೆಯೊಳಗೆ ತಂದು ಕರೊನಾ ಸೋಂಕಿನ ಪಿಡುಗಿನಿಂದ ಪಾರು ಮಾಡುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಜೀವ-ಜೀವನ ರಕ್ಷಿಸುವ ಜತೆಗೆ ಸೋಂಕು ನಿಯಂತ್ರಿಸಲೆಂದು ಜಾರಿಗೆ ತಂದ ಕರೊನಾ ನಿರ್ಬಂಧ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಷಯದಲ್ಲಿ ಜನಸಾಮಾನ್ಯರು ಮತ್ತು ರಾಜಕಾರಣಿಗಳು ಎಂಬ ತಾರತಮ್ಯವಿಲ್ಲ. ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ ಎಂಬ ಸಮಜಾಯಿಷಿ ನೀಡಿದರು. ಅಧಿಕಾರಿಗಳು ತಮ್ಮ ಕರ್ತವ್ಯದ ಭಾಗವಾಗಿ ಗಂಟಲು ಮಾದರಿ ಪಡೆಯಲು ಹೋಗಿದ್ದರು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವರ್ತಿಸಿದ ರೀತಿ ಬೇಸರ ಉಂಟು ಮಾಡುತ್ತದೆ. ಇಲಾಖೆ ಪ್ರಯತ್ನಕ್ಕೆ ಸ್ಪಂದಿಸದ ಅವರ ನಡವಳಿಕೆ ಏನೆಂಬುದು ಎತ್ತಿ ತೋರಿಸುತ್ತದೆ ಎಂದು ಸಿಎಂ ಸಿಡಿಮಿಡಿ ವ್ಯಕ್ತಪಡಿಸಿದರು.

ಇಂದು ಸಿದ್ದರಾಮಯ್ಯ ಹಾಜರು: ಜ್ವರದಿಂದ ಬಳಲಿ ಮೊದಲ ದಿನದ ಮೊದಲ 1 ಗಂಟೆಯಲ್ಲೇ ಹೊರಬಿದ್ದಿದ್ದ ಸಿದ್ದರಾಮಯ್ಯ ಸೋಮವಾರ ಚೇತರಿಸಿಕೊಂಡಿದ್ದು, ಮಂಗಳವಾರ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. ಮೈಸೂರು ಜಿಲ್ಲೆಯ ಕಾರ್ಯಕರ್ತರು ಭಾಗವಹಿಸುವುದರಿಂದ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅವರು ಸೋಮವಾರ ವಿಶ್ರಾಂತಿಯಲ್ಲಿದ್ದರು. ಮಂಗಳವಾರ ಬೆಳಗ್ಗೆ ಕನಕಪುರಕ್ಕೆ ತೆರಳುವ ಡಿ.ಕೆ.ಶಿವಕುಮಾರ್ ಜತೆ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾದಯಾತ್ರೆ ಮಧ್ಯೆ, ಸಿದ್ದರಾಮಯ್ಯ ಅವರ ಆರೋಗ್ಯವನ್ನು ಡಿಕೆಶಿ ವಿಚಾರಿಸಿದರು.

ಪಾದಯಾತ್ರೆಗೆ ಹೈ ತೃಪ್ತಿ: ನಿರೀಕ್ಷೆಯಂತೆ ಸರಾಗವಾಗಿ ಸಾಗುತ್ತಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಹೈಕಮಾಂಡ್ ತೃಪ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧ ಪಕ್ಷದ ಹೈಕಮಾಂಡ್ ಎರಡು ಸುತ್ತಿನಲ್ಲಿ ಮಾಹಿತಿ ಸಂಗ್ರಹಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಂದು ವೇಳೆ ಸರ್ಕಾರ ಪಾದಯಾತ್ರೆಗೆ ಅಡ್ಡಿಪಡಿಸಿದರೆ ಅದರಿಂದ ಹೆಚ್ಚಿನ ಲಾಭ ಪಕ್ಷಕ್ಕಾಗಲಿದೆ ಎಂಬ ಅಭಿಪ್ರಾಯವನ್ನು ದೆಹಲಿ ನಾಯಕರೂ ನೀಡಿದ್ದರು. ಪಾದಯಾತ್ರೆ ನಡೆಯಲೇಬೇಕೆಂಬ ಡಿ.ಕೆ.ಶಿವಕುಮಾರ್ ಹಠದ ಹಿಂದಿನ ದೊಡ್ಡ ಕಾರಣ ಇದೂ ಒಂದಾಗಿತ್ತು. ಪಕ್ಷ ಸಂಘಟನೆಗಾಗಿ ವಿವಿಧ ಕಾರ್ಯಕ್ರಮ ಜೋಡಿಸುವ ಬಗ್ಗೆ ಹಲವು ತಿಂಗಳ ಹಿಂದೆಯೇ ಚರ್ಚೆ ನಡೆಸಿದ್ದ ಪಕ್ಷದ ರಾಜ್ಯ ಉಸ್ತುವಾರಿ ಪಾದಯಾತ್ರೆ ನಡೆಸುವ ಕುರಿತು ಉತ್ಸುಕರಾಗಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಕಂದಕ ನಿವಾರಣೆಗೆ ನಡೆಸಿದ ಹಲವು ಪ್ರಯತ್ನದಲ್ಲಿ ಪಾದಯಾತ್ರೆಯೂ ಒಂದಾಗಿತ್ತು. ಹೀಗಾಗಿ ಮೇಕೆದಾಟು ಪಾದಯಾತ್ರೆ ಬಗ್ಗೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿತ್ತು. ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಈಗ ಪಾದಯಾತ್ರೆ ಸೂಕ್ತವಲ್ಲ ಎಂದು ಪಕ್ಷದ ಹಲವು ಮುಖಂಡರು ಅಭಿಪ್ರಾಯಪಟ್ಟರೂ ಡಿಕೆಶಿ ಅಭಿಪ್ರಾಯಕ್ಕೆ ಮಣೆ ಹಾಕಿದ್ದ ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಪಾದಯಾತ್ರೆ ನಡೆಯಲಿ ಎಂದು ಕೊನೇ ಘಳಿಗೆಯಲ್ಲಿ ಫರ್ವನು ಹೊರಡಿಸಿದ್ದರು.

ಏನೆಲ್ಲ ಮಾಹಿತಿ ಸಂಗ್ರಹ?: ಉದ್ಘಾಟನಾ ಕಾರ್ಯಕ್ರಮದ ವರದಿ, ಪಾದಯಾತ್ರೆಯಲ್ಲಿ ಯಾರೆಲ್ಲ ಹಾಜರಾಗಿದ್ದಾರೆ, ಯಾವ ರೀತಿ ತೊಡಗಿಕೊಂಡಿದ್ದಾರೆ, ಒಂದು ವೇಳೆ ದೂರ ಉಳಿದಿದ್ದರೆ ಪಕ್ಷದ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆಯೇ? ಯಾತ್ರೆಯ ಉದ್ದಕ್ಕೂ ನಾಯಕರು, ಶಾಸಕರು, ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಅವರ ನಡವಳಿಕೆಗಳನ್ನು ದೆಹಲಿ ನಾಯಕರು ತಮ್ಮ ನೆಟ್​ವರ್ಕ್ ಮೂಲಕ ಕಲೆ ಹಾಕಿದ್ದಾರೆಂದು ಗೊತ್ತಾಗಿದೆ.