ನ್ಯೂಸ್

ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಎಂಇಐಎಲ್200 ಕೋಟಿ ದೇಣಿಗೆ

ಹೈದರಾಬಾದ್ : ತೆಲಂಗಾಣದ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಯಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್)ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಹೈದರಾಬಾದ್‌ನಲ್ಲಿ ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿ ನಿರ್ಮಾಣಕ್ಕೆ 200 ಕೋಟಿ ದೇಣಿಗೆ ನೀಡುವ ಒಡಂಬಡಿಕೆಗೆ ಶನಿವಾರ ಸಹಿ ಹಾಕಿದೆ. 
ತೆಲಂಗಾಣ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಶ್ವವಿದ್ಯಾಲಯವು ಕೌಶಲ ಮತ್ತು ಉದ್ಯಮಶೀಲತೆಯಲ್ಲಿ ಸುಧಾರಿತ ತರಬೇತಿಯನ್ನು ಒದಗಿಸುವ ಮೂಲಕ ಯುವಜನರಿಗೆ ಉಜ್ವಲ ಭವಿಷ್ಯ ನಿರ್ಮಿಸುವ ಗುರಿ ಹೊಂದಿದೆ. 
ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ತೆಲಂಗಾಣದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ, ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ಮತ್ತು ವಿಶ್ವವಿದ್ಯಾಲಯದ ಉಪಕುಲಪತಿ ವಿಎಸ್‌ಎಸ್ ಸುಬ್ಬರಾವ್ ಸಮ್ಮುಖದಲ್ಲಿ ಈ  ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ಸಚಿವರಾದ ಶ್ರೀಧರ್ ಬಾಬು, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟರೆಡ್ಡಿ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಸಂಸದ ಅನಿಲ್ ಕುಮಾರ್ ಯಾದವ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಎಂಇಐಎಲ್ ನಿಯೋಗದ ನೇತೃತ್ವ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣರೆಡ್ಡಿ ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಯುವಕರನ್ನು ಬೆಂಬಲಿಸುವ ಸಂಸ್ಥೆಯ ದೃಷ್ಟಿಕೋನವನ್ನು ಹಂಚಿಕೊಂಡರು. ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೈದರಾಬಾದ್‌ನ ಹೊರವಲಯದ ಕಂದುಕುರು ಮಂಡಲದ ಮೀರ್ ಖಾನ್ ಪೇಟಾದಲ್ಲಿ 57 ಎಕರೆಯ ವಿಶಾಲವಾದ ಸ್ಥಳದಲ್ಲಿ ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಿದ್ದರು. 
ಈ ಯೂನಿವರ್ಟಿಸಿ ಕ್ಯಾಂಪಸ್‌ನಲ್ಲಿ  ಅಕಾಡೆಮಿಕ್ ಬ್ಲಾಕ್, ಆಡಳಿತಾತ್ಮಕ ಬ್ಲಾಕ್, ಗ್ರಂಥಾಲಯ ಮತ್ತು ಕಂಪ್ಯೂಟರ್ ಹಬ್ ಸೇರಿದಂತೆ ಅಧಿಕಾರಿಗಳ ವಸತಿ ಗೃಹ ಮತ್ತು  700 ಆಸನಗಳ ಸಭಾಂಗಣ ಮತ್ತು ಕಾನ್ಫರೆನ್ಸ್ ಕೊಠಡಿ ಇತ್ಯಾದಿ ಕಟ್ಟಡಗಳು ನಿರ್ಮಾಣವಾಗಲಿವೆ.

https://www.vijayavani.net/bwssb-chairman-warns-of-action-against-money-extortionists-for-cauvery-water-connection