- ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿರುವ ನಟಿ
- ಡಿ ಡಿ ಢಿಕ್ಕಿಯಲ್ಲಿ ವಕೀಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಮೇಘನಾ
- ಕೆಂಪಾಂಬುಧಿ ಚಿತ್ರದಲ್ಲಿ ಕೆಂಪೇಗೌಡರ ಪತ್ನಿಯ ಪಾತ್ರದಲ್ಲಿ ನಟಿ
ಬೆಂಗಳೂರು: ‘ಚಾರ್‌ಮಿನಾರ್’ ನಟಿ ಮೇಘನಾ ಗಾಂವ್ಕರ್ ಮುಂಬೈ ವಿವಿಯಿಂದ ಪಿಎಚ್.ಡಿ.ಪದವಿ ಪಡೆದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು ರಂಜಿನಿ ರಾಘವನ್ ನಿರ್ದೇಶನದ ‘ಡಿ ಡಿ ಢಿಕ್ಕಿ’ ಮತ್ತು ರಮೇಶ್ ಬೇಗಾರ್ ಆ್ಯಕ್ಷನ್-ಕಟ್ ಹೇಳಿರುವ ಐತಿಹಾಸಿಕ ‘ಕೆಂಪಾಂಬುಧಿ’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಎರಡು ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿರುವ ಅವರು ಮತ್ತೊಂದು ಸಿನಿಮಾದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಜರ್ನಿ ಹಂಚಿಕೊಂಡ ನಟಿ ಮೇಘನಾ, ‘ಮೊದಲಿನಿಂದಲೂ ನಿರ್ದೇಶಕಿಯರ ಸಿನಿಮಾದಲ್ಲಿ ನಟಿಸಬೇಕು ಎಂಬುದು ಆಸೆ ಇತ್ತು. ಅದೀಗ ರಂಜಿನಿ ರಾಘವನ್ ಮೂಲಕ ಈಡೇರಿದೆ. ‘ಡಿ ಡಿ ಢಿಕ್ಕಿ’ಯಲ್ಲಿ ವಕೀಲೆಯಾಗಿದ್ದು, ಅತಿಥಿ ಪಾತ್ರವಾದರೂ, ಆಳವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಹಿಳೆ. ವೈಯಕ್ತಿಕವಾಗಿ ನಾನು ಇಂತಹ ಪಾತ್ರಗಳನ್ನೇ ಇಷ್ಟಪಡುತ್ತೇನೆ. ಚಿತ್ರದಲ್ಲಿರುವ ನನ್ನ ಒಂದೊಂದು ಸಂಭಾಷಣೆಯು ಹೆಣ್ಣಿನ ಅಂತಕರಣವನ್ನು ಎತ್ತಿಹಿಡಿಯುತ್ತವೆ. ಸಂಭಾಷಣೆಯೇ ನನ್ನ ಪಾತ್ರ ಹಾಗೂ ಚಿತ್ರದ ಹೈಲೈಟ್. ಮಹಿಳಾ ಸಬಲೀಕರಣ ಮತ್ತು ಪ್ರಾಧಾನ್ಯದ ಕುರಿತು ರಂಜಿನಿ ತುಂಬಾ ಆಪ್ತವಾಗಿ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಬೆರಳಣಿಕೆಯಷ್ಟು. ಹೀಗಿರುವಾಗ,ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ರಂಜಿನಿ ಸ್ಫೂರ್ತಿಯಾಗಲಿ. ಈ ಚಿತ್ರಕ್ಕೆ ಇಳಯರಾಜ ಸರ್ ಸಂಗೀತ ನೀಡಿದ್ದು, ದೊಡ್ಡ ಶಕ್ತಿಯಾಗಿದ್ದು, ನಾನು ನಟಿಸುತ್ತಿರುವುದು ಸೌಭಾಗ್ಯ’ ಎಂದು ಮೇಘನಾ ಖುಷಿ ಹಂಚಿಕೊಂಡರು.
ಕನಸು ಈಡೇರಿದೆ
ಐತಿಹಾಸಿಕ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ‘ಕೆಂಪಾಂಬುಧಿ’ ಚಿತ್ರದ ಮೂಲಕ ಈಡೇರಿದೆ ಎನ್ನುವ ಮೇಘನಾ ಗಾಂವ್ಕರ್, ‘ಯಾವುದೇ ಕಲಾವಿದರಾಗಲಿ ವೃತ್ತಿ ಜೀವನದಲ್ಲಿ ಇಂತಹ ಪಾತ್ರ ಮಾಡಬೇಕು ಎಂಬ ಆಸೆ ಇರುತ್ತದೆ. ಮೊದಲಿನಿಂದಲೂ ನನಗೆ ಐತಿಹಾಸಿಕ ಪಾತ್ರ ಮಾಡಬೇಕೆಂಬ ಆಸೆಯು ‘ಕೆಂಪಾಂಬುಧಿ’ಯಿಂದ ಈಡೇರಿದೆ. ಇದು ಕೆಂಪೇಗೌಡರ ಬಯೋಪಿಕ್. ನನ್ನದು ಅವರ ಪತ್ನಿ ಚೆನ್ನಾಂಬಾ ಪಾತ್ರ. ಈ ಐತಿಹಾಸಿಕ ಪಾತ್ರದ ವಸಲಂಕಾರ, ಲುಕ್ ಬೇರೆ ರೀತಿಯ ಫೀಲ್ ಕೊಡುತ್ತದೆ. ನಾನು ಈ ಹಿಂದೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರಿಂದಾಗಿ ಈ ಪಾತ್ರ ನಿರ್ವಹಣೆ ಸುಲಭವಾಯಿತು’ ಎನ್ನುವ ಅವರು ಸದ್ಯ ಇನ್ನು ೋಷಣೆಯಾಗದ ಸಿನಿಮಾದ ಶೂಟಿಂಗ್‌ನಲ್ಲಿದ್ದು, ಇನ್ನೊಂದು ಚಿತ್ರದ ಮಾತುಕತೆಯಲ್ಲಿದ್ದಾರೆ. ಜತೆಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.