ನವದೆಹಲಿ: ಕರೊನಾ ವಿರುದ್ಧದ ಲಸಿಕೆ ಕೆಲವೇ ತಿಂಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದ್ದು, ದೇಶಾದ್ಯಂತ ಇದನ್ನು ತ್ವರಿತವಾಗಿ ವಿತರಿಸುವ ಸಲುವಾಗಿ ಕೇಂದ್ರ ಸರ್ಕಾರ ಬೃಹತ್ ಯೋಜನೆ ಸಿದ್ಧಪಡಿಸಿದೆ.
ದೇಶದ ಪ್ರತಿ ಸೋಂಕಿತರಿಗೆ ಲಸಿಕೆಯನ್ನು ಲಭ್ಯಗೊಳಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿನ ಕೋಲ್ಡ್ ಸ್ಟೋರೇಜ್ಸೌಲಭ್ಯಗಳನ್ನು ಪಟ್ಟಿ ಮಾಡುತ್ತಿದೆ. ಔಷಧ ವಲಯ, ಆಹಾರ ಸಂಸ್ಕರಣಾ ಉದ್ಯಮ, ಕೃಷಿ ಕ್ಷೇತ್ರ, ಆಹಾರ ವಿತರಣಾ ಸ್ಟಾರ್ಟ್ಅಪ್ಗಳಾದ ಸ್ವಿಗ್ಗಿ, ಜೊಮ್ಯಾಟೊ ಇನ್ನಿತರ ಖಾಸಗಿ ವಲಯದ ಅನೇಕ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಆರೋಗ್ಯ ತಜ್ಞರ ಗುಂಪು ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.
ಲಸಿಕೆ ವಿತರಣೆಗಾಗಿ ಸಿದ್ಧಪಡಿಸಲಾಗಾತ್ತಿರುವ ಯೋಜನೆಯ ಕರಡು ವರದಿ ಮುಂದಿನ ವಾರದ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಲಸಿಕೆಗಳ ಸದ್ಯದ ಪ್ರಯೋಗ ವರದಿಗಳ ಪ್ರಕಾರ ಇನ್ನು ಕೆಲವೇ ತಿಂಗಳಲ್ಲಿ ಕನಿಷ್ಠ ಒಂದು ದೇಶಿಯ ಹಾಗೂ ಮೂರು ವಿದೇಶಿ ಲಸಿಕೆಗಳು ಬಳಕೆಗೆ ಸಿದ್ಧವಾಗಿ ಭಾರತಕ್ಕೆ ದೊರೆಯುವ ಸಾಧ್ಯತೆ ಇದೆ. ಆದರೆ ಬಹುತೇಕ ಲಸಿಕೆಗಳನ್ನು ಶೂನ್ಯ ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಅಂದರೆ ಮೈನಸ್ ತಾಪಮಾನದಲ್ಲಿ ಇಡುವ ಅವಶ್ಯಕತೆ ಇದೆ. ಇನ್ನು ಕೆಲ ಲಸಿಕೆಗಳನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಇಡಬೇಕಾಗುತ್ತದೆ. ಹೆಚ್ಚಿನ ಲಸಿಕೆಗಳು 2.5 ಎಂ.ಎಲ್, 10ಎಂ.ಎಲ್, 20ಎಂ.ಎಲ್ ಮತ್ತು 50ಎಂ.ಎಲ್ ಪ್ರಮಾಣದ ಬಾಟಲ್ಗಳಲ್ಲಿ ಲಭ್ಯವಿರಲಿವೆ. ಆದರೆ ಲಸಿಕೆಯನ್ನು ಉಚಿತವಾಗಿ ವಿತರಿಸಬೇಕೆ ಅಥವಾ ದರ ನಿಗದಿಪಡಿಸಬೇಕೆ ಎಂಬ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಲಸಿಕೆಗಳನ್ನು ಸಂಗ್ರಹಿಸಿ, ವಿತರಿಸಲು ಅಗತ್ಯವಾದ ಕೋಲ್ಡ್ ಸ್ಟೋರೇಜ್ವ್ಯವಸ್ಥೆಗಳನ್ನು ಸರ್ಕಾರ ಅಂದಾಜು ಮಾಡುತ್ತಿದ್ದು, ಆರಂಭಿಕ 6 ತಿಂಗಳೊಳಗೆ ಶೇ. 18 ಜನಸಂಖ್ಯೆಗೆ ಲಸಿಕೆ ತಲುಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಕೋಲ್ಡ್ ಸ್ಟೋರೇಜ್ಸಾಮರ್ಥ್ಯದ ವರ್ಧನೆಗೂ ಸರ್ಕಾರ ಮುಂದಾಗಿದೆ. ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಲಸಿಕೆ ಸಂಗ್ರಹಿಸಲು ಸುಮಾರು 2 ರಿಂದ 3 ತಿಂಗಳು ಕಾಲ ಬೃಹತ್ ಕೋಲ್ಡ್ ಸ್ಟೋರೇಜ್ಗಳ ಅವಶ್ಯಕತೆ ಇರಲಿದೆ. ಇವುಗಳ ಜತೆಗೆ ಲಸಿಕೆಗಳನ್ನು ಸಾಗಿಸಲು ಕೋಲ್ಡ್ ಸ್ಟೋರೇಜ್ವ್ಯವಸ್ಥೆ ಹೊಂದಿರುವ ವಾಹನಗಳೂ ಬೇಕಾಗುತ್ತವೆ.
ಮನುಷ್ಯನ ಚರ್ಮದ ಮೇಲೆ ಕರೊನಾ ವೈರಸ್ 9 ತಾಸಿಗಿಂತಲೂ ಹೆಚ್ಚು ಸಮಯ ಜೀವಂತ ಇರುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ಫ್ಲೂ ವೈರಸ್ ಚರ್ಮದ ಮೇಲೆ ಬದುಕಿರುವುದಕ್ಕಿಂತ ಹೆಚ್ಚು ಸಮಯ ಕರೊನಾ ಬದುಕಿರುತ್ತದೆ. ವೈರಸ್ಗಳು ಹ್ಯಾಂಡ್ ಸ್ಯಾನಿಟೈಸರ್ನಿಂದ ವೇಗವಾಗಿ ನಿಷ್ಕ್ರಿಯವಾಗುತ್ತವೆ. ಹೀಗಾಗಿ ಪದೇ ಪದೆ ಕೈ ತೊಳೆಯಬೇಕು ಎಂದು ತಜ್ಞರು ಹೇಳಿದ್ದಾರೆ.
ಕರೊನಾ ಪ್ರಕರಣ ಹೆಚ್ಚು ದಾಖಲಾಗುತ್ತಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಕೇರಳ, ತೆಲಂಗಾಣ, ಅಸ್ಸಾಂ, ಜಾರ್ಖಂಡ್, ಪಂಜಾಬ್, ಒಡಿಶಾ ಮತ್ತು ದೆಹಲಿಯಲ್ಲಿ ಕೋಲ್ಡ್ ಸ್ಟೋರೇಜ್ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯತೆ ಇದೆ.
ದೇಶದಲ್ಲಿ ಪ್ರತಿದಿನ ವರದಿಯಾಗುವ ಕರೊನಾ ಸಾವುಗಳು ಪ್ರಮಾಣ ಸತತ 6ನೇ ದಿನ ಇಳಿಕೆ ಕಂಡಿದ್ದು, 1 ಸಾವಿರಕ್ಕೂ ಕಡಿಮೆ ಸಾವುಗಳು ವರದಿಯಾಗುತ್ತಿವೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಸತತ 6 ದಿನಗಳಿಂದ ಇಳಿಕೆ ಕಂಡು ಬಂದಿದೆ. ಗುರುವಾರ 70,797 ಹೊಸ ಪ್ರಕರಣಗಳು ವರದಿಯಾಗಿದ್ದು, 967 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ 59.03 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದು, ಇನ್ನೂ 8.93 ಲಕ್ಷ ಸಕ್ರಿಯ ಪ್ರಕರಣಗಳಿವೆ. ಜಾಗತಿಕವಾಗಿ ಈವರೆಗೆ 10.67 ಲಕ್ಷ ಮಂದಿ ಕರೊನಾಗೆ ಬಲಿಯಾಗಿದ್ದು, 3.68 ಕೋಟಿ ಸೋಂಕು ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 2.77 ಕೋಟಿ ಸೋಂಕಿತರು ಈಗಾಗಲೇ ಗುಣಮುಖರಾಗಿದ್ದಾರೆ.