ನ್ಯೂಸ್

ಗ್ರಾಪಂ ನೌಕರರ ಬೇಡಿಕೆ ಪರಿಶೀಲನೆಗೆ ಸಭೆ

ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್-ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳ ಬೇಡಿಕೆಗಳನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು. ನೌಕರರ ಬೇಡಿಕೆಗಳ ಪರಿಶೀಲನೆಗಾಗಿಯೇ ಇತ್ತೀಚೆಗೆ ಸರ್ಕಾರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯ ಚೊಚ್ಚಲ ಸಭೆಯಾದ ಕಾರಣ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ.

ಜಿಲ್ಲಾ ಪಂಚಾಯಿತಿಗಳ ಹಂತದಲ್ಲಿ ಗ್ರೇಡ್-1 ಕಾರ್ಯದರ್ಶಿ ವೃಂದದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಂದಕ್ಕೆ ಬಡ್ತಿ ನೀಡುವುದು, ಕರ್ನಾಟಕ ಸಾಮಾನ್ಯ ಸೇವೆಗಳು,ನಿಯಮಗಳು, 2008ರಲ್ಲಿ ನೇರ ನೇಮಕೇತರ ಕೋಟಾದಲ್ಲಿನ ಅನುಪಾತವನ್ನು ಶೇಕಡವಾರು ಹೆಚ್ಚಿಸುವುದು, ಗ್ರೇಡ್-1 ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಿಂದ ಪಿಡಿಒ ಹುದ್ದೆಗೆ ಶೇ.60 , ಗ್ರೇಡ್ 2 ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಿಂದ ಗ್ರೇಡ್-1 ಕಾರ್ಯದರ್ಶಿ-ಶೇ.80, ಕರವಸೂಲಿಗಾರ ಮತ್ತು ಡೇಟಾ ಎಂಟ್ರಿ ಅಪರೇಟರ್‌ಗಳಿಂದ ಗ್ರೇಡ್-2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ-ಶೇ.100(ಸೇವೆಯೊಳಗಿನ ನೇರ ನೇಮಕಾತಿ), ಕರವಸೂಲಿಗಾರ ಮತ್ತು ಡೇಟಾ ಎಂಟ್ರಿ ಅಪರೇಟರುಗಳಿಂದ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶೇ.75 ಹಾಗೂ ಎಲ್ಲ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸುವ ಬೇಡಿಕೆಗಳನ್ನು ವೃಂದ ಸಂಘಗಳು ಸರ್ಕಾರದ ಮುಂದಿಟ್ಟಿವೆ. ಈ ಬೇಡಿಕೆಗಳ ಪರಿಶೀಲನೆಗೆ ರಚಿಸಲಾದ ಸಮಿತಿ ಸೋಮವಾರ ಮೊದಲ ಸಭೆ ನಡೆಸಿತು.