ನ್ಯೂಸ್

18ಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸಭೆ

ಗೋವಿಂದರಾಜು ಚಿನ್ನಕುರ್ಚಿ

ನವದೆಹಲಿ: ಜೂನ್ 18ರಂದು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರು ಎಲ್ಲ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಒಂದು ತೀರ್ಮಾನಕ್ಕೆ ಬರುವ ಭರವಸೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವಾಲಯ ಸಭೆ ಕರೆದಿದೆ. ಅಂದು ನಮ್ಮ ಸರ್ಕಾರದ ನಿರ್ಧರವನ್ನು ತಿಳಿಸಲಾಗುತ್ತದೆ. ಎಲ್ಲ ಸರ್ಕಾರಗಳ ಅಭಿಪ್ರಾಯ ಪಡೆದು ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ಇದೆ ಎಂದು ತಿಳಿಸಿದರು.

ದೆಹಲಿ ಭೇಟಿ ವಿಚಾರಕ್ಕೆ ಉತ್ತರಿಸಿದ ಅವರು, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ಬಂದಿದ್ದೆನೆ. ಬಿಬಿಎಂಪಿಯ 15 ಸದಸ್ಯರ ತಂಡ ದೆಹಲಿಗೆ ಬಂದಿದೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ. ಅಲ್ಲಿಗೆ ಭೇಟಿ ಕೊಟ್ಟು ಅಲ್ಲಿ ಬಳಸಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಹೇಳಿದರು.