ಕರ್ನೂಲ್: ಇಡೀ ಜಗತ್ತಿನ ವಿರುದ್ಧ ಯುದ್ಧ ಸಾರಿರುವ ಮಹಾಮಾರಿ ಕರೊನಾ ವೈರಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಆಯಾ ರಾಷ್ಟ್ರಗಳ ಸರ್ಕಾರಗಳು ಮಾಡುತ್ತಿವೆ.
ಭಾರತದಲ್ಲೂ ಸಹ ಕರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೇ ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿವೆ.
ಇನ್ನು ಲಾಕ್ಡೌನ್ ಸಂದರ್ಭದಲ್ಲಿ ರಸ್ತೆರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೂ ಕೂಡ ತಮ್ಮ ಕೈಲಾದ ಮಟ್ಟಿಗೆ, ವಿಭಿನ್ನವಾಗಿ ಕರೊನಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಅದರಲ್ಲೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪ್ಯಾಪಿಲಿ ಪಟ್ಟಣದಲ್ಲಿ ಪೊಲ್ ಸಬ್ ಇನ್ಸ್ಪೆಕ್ಟರ್ ಮಾರುತಿ ಶಂಕರ್ ಎಂಬುವರು ಕುದುರೆ ಮೇಲೆ ಸಂಚರಿಸುತ್ತ ಜನರಿಗೆ ಕರೊನಾ ಬಗ್ಗೆ ಹೇಳುತ್ತಿದ್ದಾರೆ.
ಅದರಲ್ಲೇನು ವಿಶೇಷ ಎಂದು ಕೇಳಬೇಡಿ. ಕುದುರೆಯ ದೇಹದ ಮೇಲೆ ಬರೆಯಲಾದ ಚಿತ್ರ ಎಲ್ಲರ ಗಮನಸೆಳೆದಿದೆ. ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ. ಬಿಳಿ ಬಣ್ಣದ ಕುದುರೆಯ ಮೈಮೇಲೆ ಕೆಂಪು ಬಣ್ಣದಲ್ಲಿ ವೈರಸ್ ಮಾದರಿಯನ್ನು ಚಿತ್ರಿಸಲಾಗಿದೆ. ಮೈತುಂಬ ವೈರಸ್ ಚಿತ್ರವನ್ನು ಹೊಂದಿದ ಕುದುರೆ ಮೇಲೆ ಕುಳಿತ ಪೊಲೀಸ್ ಅಧಿಕಾರಿ ಬೀದಿಯಲ್ಲಿ, ಸಣ್ಣ ಕಾಲನಿಗಳ ರಸ್ತೆಯಲ್ಲಿ, ಪಟ್ಟಣಗಳಲ್ಲಿ ಸಂಚರಿಸುತ್ತ ಜಾಗೃತಿ ಮೂಡಿಸುತ್ತಿದ್ದಾರೆ.
ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಕೈ ತೊಳೆಯಿರಿ. ಲಾಕ್ಡೌನ್ ಇರುವ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕ್ರಮ ತುಂಬ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಕೆಂಪು ಬಣ್ಣದ ಕರೊನಾ ವೈರಸ್ ಚಿತ್ರಗಳನ್ನು ಹೊಂದಿರುವ ಈ ಕುದುರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ, ಮನೆಮನೆಗೂ ಕರೊನಾ ಬರುತ್ತಿದೆ, ಜಾಗೃತರಾಗಿರಿ ಎಂಬ ಸಂದೇಶ ಸಾರುವಂತೆ ಭಾಸವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿಯೋರ್ವ ಕರೊನಾ ಹೆಲ್ಮೆಟ್ ಧರಿಸಿ, ರಸ್ತೆಯಲ್ಲಿ ಬರುವ ವಾಹನಸವಾರರಿಗೆ ಎಚ್ಚರಿಕೆ ನೀಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಹೆಲ್ಮೆಟ್ನ್ನು ಗೌತಮ್ ಎಂಬುವರು ಡಿಸೈನ್ ಮಾಡಿದ್ದರು. (ಏಜೆನ್ಸೀಸ್)