ಆಗ್ರಾ: ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಇಂದು ಕಣ್ತುಂಬಿಕೊಂಡರು.
ಮೊದಲ ಬಾರಿಗೆ ತಾಜ್ ಮಹಲ್ ನೋಡಿದಾಗ ಟ್ರಂಪ್ ದಂಪತಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹೀಗಾಗಿ ಪ್ರವಾಸೋದ್ಯಮ ಸಚಿವಾಲಯದ ಟೂರಿಸ್ಟ್ ಗೈಡ್ ನಿತಿನ್ ಕುಮಾರ್ ಸಿಂಗ್ ಎಲ್ಲರ ಕುತೂಹಲವನ್ನು ತಣಿಸಿದ್ದಾರೆ.
ನಿತಿನ್ ಇಂದು ಟ್ರಂಪ್ ದಂಪತಿಗೆ ಪ್ರೇಮಸೌಧದ ಇತಿಹಾಸವನ್ನು ಪರಿಚಯಿಸಿದರು. ಈ ಬಗ್ಗೆ ಮಾತನಾಡಿರುವ ಅವರು ತಾಜ್ ಮಹಲ್ ಕುರಿತಾದ ಒಂದೊಂದು ಕ್ಷಣದ ಮಾಹಿತಿಯನ್ನು ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯ ಟ್ರಂಪ್ ಅವರಿಗೆ ನೀಡಿದ್ದೇನೆ ಎಂದು ತಿಳಿಸಿದರು.
ತಾಜ್ ಮಹಲ್ ನೋಡಿದ ತಕ್ಷಣ ಅತ್ಯದ್ಭುತ ಎಂದು ಹುಬ್ಬೇರಿಸಿದರು. ಅಲ್ಲದೆ, ಮತ್ತೊಮ್ಮೆ ಭೇಟಿ ನೀಡುವುದಾಗಿ ಟ್ರಂಪ್ ದಂಪತಿ ಭರವಸೆ ನೀಡಿದರು ಎಂದು ಹೇಳಿದರು. (ಏಜೆನ್ಸೀಸ್)